ಡಿ.ವೈ.ಗೆರೆಯಲ್ಲಿ ಗುರುವಂದನಾ ಸಮಾರಂಭ

ಹುಳಿಯಾರು, ನ. ೯- ಭಾರತೀಯ ಸಂಸ್ಕೃತಿಯಲ್ಲಿ ಗುರು ಶಿಷ್ಯರ ಅವಿನಾಭಾವ ಸಂಬಂಧದ ಮಹತ್ವದ್ದು. ನಮ್ಮ ಬದುಕನ್ನು ಕಟ್ಟಿಕೊಟ್ಟಿರುವ ನಮ್ಮ ಮಾತೃ ಭಾಷೆಯ ಅಳಿವು ಉಳಿವಿನ ಅಸ್ತಿತ್ವದ ಪ್ರಶ್ನೆ ಎದುರಾಗಿರುವುದರ ಜತೆಗೆ ದೇಶದ ಬೆನ್ನೆಲುಬಾದ ರೈತನ ಬದುಕನ್ನು ನೈತಿಕವಾಗಿ ಮೇಲೆತ್ತುವ ಪ್ರಾಮಾಣಿಕ ಪ್ರಯತ್ನಗಳು ಭವಿಷ್ಯತ್ತಿನ ಭಾವಿ ಪ್ರಜೆಗಳಾಗಿ ರೂಪುಗೊಳ್ಳುತ್ತಿರುವ ಮುದ್ದು ಮಕ್ಕಳ ಮೇಲಿದೆ ಎಂದು ಹುಳಿಯಾರು ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಿಳಿಗೆರೆ ಕೃಷ್ಣಮೂರ್ತಿ ಹೇಳಿದರು.

ಪಟ್ಟಣಕ್ಕೆ ಸಮೀಪವಿರುವ ದೊಡ್ಡಎಣ್ಣೇಗೆರೆಯ ಶ್ರೀ ಗವಿರಂಗನಾಥ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 1995ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಣೆ ಕಾರ್ಯಕ್ರಮ ಮತ್ತು ಗುರುವಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ನಿವೃತ್ತ ಡಿವೈಎಸ್ಪಿ ಹಾಗೂ ಶಿಕ್ಷಕರಾದ ಬಿ.ಸಿ.ಉಮಾಪತಿ ಮಾತನಾಡಿ, ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಅತ್ಯಂತ ಅವಶ್ಯವಾಗಿದ್ದು, ಹಿರಿಯ ವಿದ್ಯಾರ್ಥಿಗಳ ಕಾರ್ಯವನ್ನು ಶ್ಲಾಘಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಲಿಂಗರಾಜ ಅರಸು ವಹಿಸಿದ್ದರು.

Leave a Comment