ಡಿ.ಕೆ ಶಿ ಬಂಧನ ಖಂಡಿಸಿ ಪ್ರತಿಭಟನೆ ; ನಷ್ಟದ ವಿವರ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಸೆ 12 -ಅಕ್ರಮ ಹಣ ಗಳಿಕೆ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ ಜಾರಿ ನಿರ್ದೇಶನಾಲಯ (ಇಡಿ) ಕ್ರಮ ವಿರೋಧಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಬಂದ್ ನಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಉಂಟಾಗಿರುವ ನಷ್ಟದ ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ  ಹೈಕೋರ್ಟ್ ಸೂಚಿಸಿದೆ.

ರಾಜ್ಯದಲ್ಲಿ ಪ್ರತಿಭಟನಾ ಸಂಕೇತವಾಗಿ ಬಂದ್ ನಡೆಸುವುದರ ಮೇಲೆ ನಿರ್ಬಂಧ ಹೇರಬೇಕು ಎಂದು ಕೋರಿ ಶ್ರದ್ಧಾ ಪೇರೆಂಟ್ ಅಸೋಸಿಯೇಷನ್ ಹಾಗೂ ನಾಗರಾಜ್ ಶರ್ಮಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲ ಎನ್.ಪಿ. ಅಮೃತೇಶ್ ವಾದ ಮಂಡಿಸಿ, ಕಳೆದ 10 ದಿನಗಳಿಂದ ರಾಜಕೀಯ ನಾಯಕರೊಬ್ಬರ ಬಂಧನ ವಿರೋಧಿಸಿ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿವೆ. ಕನಕಪುರ, ರಾಮನಗರದಲ್ಲಿ ಕೆಎಸ್ ಆರ್ ಟಿಸಿ  ಬಸ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವೆಡೆ ಕಲ್ಲು ತೂರಾಟ ನಡೆದಿದೆ. ಇದರಿಂದ ಸಂಸ್ಥೆಗೆ 1.5 ಕೋಟಿ ರೂ. ನಷ್ಟವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರು ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರಾದರೂ, ಬಂದ್ ಗೆ ಕರೆ ಕೊಟ್ಟ ರಾಜಕೀಯ ಪಕ್ಷದ ನಾಯಕರ ಮೇಲೆ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದರು.

ಜೊತೆಗೆ, ಬುಧವಾರ ನಗರದಲ್ಲಿ ಸಮುದಾಯದ ಜನರು ಹಾಗೂ ರಾಜಕೀಯ ನಾಯಕರು, ಕಾರ್ಯಕರ್ತರ ಜಾಥಾದಿಂದ ಎಲ್ಲೆಡೆ ಸಂಚಾರ ದಟ್ಟಣೆ ಉಂಟಾಗಿದ್ದು, ಸಾರ್ವಜನಿಕರು ಪರದಾಡುವಂತಾಗಿತ್ತು ಎಂದು ಆಕ್ಷೇಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರು, ಬಂದ್ ವೇಳೆ ನಡೆದಿರುವ ಅಹಿತಕರ ಘಟನೆಗಳ ಪಟ್ಟಿ ಮಾಡಲಾಗಿದೆ. ನಿನ್ನೆ ನಡೆದ ಪ್ರತಿಭಟನೆ ‌ಶಾಂತಿಯುತವಾಗಿತ್ತು ಎಂದು ತಿಳಿಸಿದರು.

ಆಗ ನ್ಯಾಯಪೀಠ, ನಷ್ಟದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿತಲ್ಲದೆ, ನಷ್ಟ ವಸೂಲಿಗೆ ಕೋರ್ಟ್ ಆಯುಕ್ತರನ್ನು ನೇಮಿಸುವ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಸೆ 16 ಕ್ಕೆ ಮುಂದೂಡಿತು.

Leave a Comment