ಡಿ.ಕೆ ಶಿಗೆ ಜಾಮೀನು ಮಂಜೂರು

ನವದೆಹಲಿ.ಅ ೨೩- ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್‌ ಇಂದು ಜಾಮೀನು ಮಂಜೂರು ಮಾಡಿದೆ.

ಜಾರಿ ನಿರ್ದೇಶನಾಲಯದ (ಇ.ಡಿ) ವಿಶೇಷ ನ್ಯಾಯಾಲಯ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್‌ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿದ್ದರು.

ದೆಹಲಿ ನಿವಾಸದಲ್ಲಿ ಪತ್ತೆಯಾದ ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ. ಈ ಮೂಲಕ ತಿಂಗಳ ನಂತರ ಮಾಜಿ ಸಚಿವ ಡಿ ಕೆ ಶಿವಕುಮಾರ್ಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ.

ಬಿಗ್‌ ರಿಲೀಫ್

ಜಾರಿ ನಿರ್ದೇಶನಾಲಯ ಮತ್ತು ಡಿಕೆಶಿ ಪರ ವಕೀಲರ ವಾದ – ಪ್ರತಿವಾದಗಳನ್ನು ಆಲಿಸಿದ್ದ ದೆಹಲಿ ಹೈಕೋರ್ಟ್ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟಾ ಆದೇಶ ಕಾಯ್ದಿರಿಸಿದ್ದರು. ಇದೀಗ ಆದೇಶ ಪ್ರಕಟಿಸಿರುವ ನ್ಯಾ. ಕೈಟಾ ಡಿಕೆಶಿಗೆ ಬಿಗ್ ರಿಲೀಫ್ ನೀಡಿದ್ದಾರೆ.

‌೫೦ ದಿನಗಳ ಕಾಲ ಜೈಲಿನಲ್ಲಿದ್ದ ಡಿಕೆಶಿ

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಡಿ.ಕೆ.ಶಿವಕುಮಾರ್ಗೆ ಜಾಮೀನು ಮಂಜೂರು ಮಾಡಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸುಮಾರು 50 ದಿನಗಳ ಕಾಲ ಜೈಲಿನಲ್ಲಿದ್ದ ಡಿಕೆಶಿ ಇಂದು (ಬುಧವಾರ) ಸಂಜೆಯೊಳಗೆ ತಿಹಾರ್‌ ಜೈಲಿನಿಂದ ಹೊರಬರುವ ಸಾಧ್ಯತೆಗಳಿವೆ.

೨೫ ಲಕ್ಷ ರೂ ಶ್ಯೂರಿಟಿ

25 ಲಕ್ಷ ರೂಪಾಯಿ ಶ್ಯೂರಿಟಿ ನೀಡುವಂತೆ ಹಾಗೂ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಅನುಮತಿ ಇಲ್ಲದೇ ವಿದೇಶಕ್ಕೆ ಹೋಗದಂತೆ ಷರತ್ತು ವಿಧಿಸಲಾಗಿದೆ.

2017ರಲ್ಲಿ ಡಿ.ಕೆ.ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ಐಟಿ ದಾಳಿಯಾದಾಗ ದಾಖಲೆಗಳಿಲ್ಲದ ಹಣ ಪತ್ತೆಯಾಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಇ.ಡಿ.ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ವಿಚಾರಣೆಗೆಂದು ದೆಹಲಿಗೆ ಕರೆಸಿದ್ದರು. ಆದರೆ ವಿಚಾರಣೆಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಬಂಧಿಸಲಾಗಿತ್ತು.

ಕೋರ್ಟ್‌ ಆವರಣದಲ್ಲಿ ಕಣೀರಿಟ್ಟ ಸುರೇಶ್‌

ಇಂದು ಡಿಕೆಶಿ ಜಾಮೀನು ಮಂಜೂರು ಆಗುತ್ತಿದ್ದಂತೆ ನ್ಯಾಯಾಲಯದ ಆವರಣದಲ್ಲೇ ಸಹೋದರ ಡಿ.ಕೆ.ಸುರೇಶ್‌ ಅವರು ಕಣ್ಣೀರಿಟ್ಟ ಪ್ರಸಂಗ ನಡೆಯಿತು.

ವಿದೇಶಕ್ಕೆ ಹೋಗಲು ಒಪ್ಪಿಗೆ ಪಡೆಯಬೇಕು

ಡಿಕೆಶಿ ಪಾರ್ಸ್‌ ಪೋರ್ಟ್‌ಗಳನ್ನು ವಶಕ್ಕೆನೀಡುವಂತೆ ಆದೇಶ ನೀಡುವ ನ್ಯಾಯಾಲಯ ವಿದೇಶಕ್ಕೆ ಹೋಗಲು ಒಪ್ಪಿಗೆ ಪಡೆಯುವಂತೆ ಸೂಚಿಸಿದೆ.

ಅನಾರೋಗ್ಯ ಕಾರಣ ಜಾಮೀನು

ಆರೋಗ್ಯದಲ್ಲಿ ಏರುಪೇರಾದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದ ಡಿ.ಕೆ.ಶಿವಕುಮಾರ್ ಬಳಿಕ ತಿಹಾರ್ ಜೈಲಿನಲ್ಲಿ ಇದ್ದರು. ಈ ಮಧ್ಯೆ ಜಾಮೀನು ಮಂಜೂರು ಮಾಡುವಂತೆ ದೆಹಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಡಿ.ಕೆ.ಶಿವಕುಮಾರ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಈ ಹಿಂದಿನ ಹಲವು ಅಕ್ರಮ ಹಣಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಉದಾಹರಣೆ ನೀಡಿ, ಇದು ಬಂಧಿಸುವಂತಹ ಕೇಸ್ ಅಲ್ಲ. ಇ.ಡಿ.ಅಧಿಕಾರಿಗಳು ಎಡವಿದ್ದಾರೆ ಎಂದು ಹೇಳಿದ್ದರು. ಅಲ್ಲದೆ ಡಿ.ಕೆ.ಶಿವಕುಮಾರ್ ವಿಚಾರಣೆಗೆ ನುಣುಚಿಕೊಂಡಿಲ್ಲ. ಅವರ ಆರೋಗ್ಯವೂ ಸರಿಯಾಗಿಲ್ಲ. ಈ ಎಲ್ಲ ವಿಚಾರಗಳನ್ನೂ ಪರಿಗಣಿಸಿ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು.

ಅದಕ್ಕೆ ಪ್ರತಿಯಾಗಿ ವಾದ ಮಾಡಿದ್ದ ಇ.ಡಿ.ಪರ ವಕೀಲ ನಟರಾಜ್, ಡಿ.ಕೆ.ಶಿವಕುಮಾರ್ಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಅವರ ಪ್ರಕರಣದಲ್ಲಿ ಅಕ್ರಮ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ವಿಚಾರಣೆಗೆ ಸಹಕರಿಸಿಲ್ಲ. ಇನ್ನೂ ವಿಚಾರಣೆ ಬಾಕಿಯಿದೆ ಎಂದು ಹೇಳಿದ್ದರು. ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಸುರೇಶ್ ಕುಮಾರ್ ಕೈಟ್ ತೀರ್ಪು ಕಾಯ್ದಿರಿಸಿದ್ದರು.

ಇಂದು ಬಿಡುಗಡೆ ಸಾಧ್ಯತೆ ಕಡಿಮೆ

ನ್ಯಾಯಲಯದ ಷರತ್ತುಗಳನ್ನು ಪಾಲಿಸಬೇಕಾಗಿರುವುದರಿಂದ ಡಿಕೆಶಿ ಇಂದು ಸಂಜೆಯೊಳಗೆ ಬಿಡುಗಡೆ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ.

ಸಿಬಿಐನಿಂದ ಇನ್ನು ಆತಂಕ

ಜಾಮೀನು ಪಡೆದಿರುವ ಡಿಕೆಶಿ ವಿರುದ್ಧ ಈಗಾಗಲೇ ಸಿಬಿಐ ಸರಕಾರದಿಂದ ಪರವಾನಗಿ ಪಡೆದು ಪ್ರಾಥಮಿಕ ತನಿಖೆ ಆರಂಭಿಸಿದ್ದು, ಡಿಕೆಶಿಗೆ ಇನ್ನು ವಿಚಾರಣೆಗಳನ್ನು ಎದುರಿಸಬೇಕಾದ ಸಾಧ್ಯತೆ ಇದೆ.

 

 

 

 

Leave a Comment