ಡಿಸ್ಟಿಂಗ್ವಿಷ್ ಏಷ್ಯನ್ ಮೈಕಾಲಜಿಸ್ಟ್ ಪ್ರಶಸ್ತಿಗೆ ಭಾಜನರಾದ ಕನ್ನಡದ ವಿಜ್ಞಾನಿ ಡಾ. ಜೋಸೆಫ್ ಭಾಗ್ಯರಾಜ್

ಬೆಂಗಳೂರು, ಅ.೧೬-ಮೈಕ್ರೋಬಯಾಲಜಿ ವಿಭಾಗದಲ್ಲಿ ಶಿಲೀಂದ್ರಗಳ ಬಗ್ಗೆ ನಡೆಸಿದ ಅಧ್ಯಯನಕ್ಕಾಗಿ ಜಪಾನ್ ದೇಶದ ೨೦೧೯ರ ಡಿಸ್ಟಿಂಗ್ವಿಷ್ ಏಷ್ಯನ್ ಮೈಕಾಲಜಿಸ್ಟ್ ಪ್ರಶಸ್ತಿಗೆ ಬೆಂಗಳೂರಿನ ಮೈಕ್ರೋಬಯಾಲಜಿ ವಿಜ್ಞಾನಿ ಡಾ. ಜೋಸೆಫ್ ಭಾಗ್ಯರಾಜ್ ಭಾಜನರಾಗಿ ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಮೈಕ್ರೋಬಯಾಲಜಿ ವಿಭಾಗದಲ್ಲಿ ಶಿಲೀಂದ್ರಗಳ ಕುರಿತು ಅಧ್ಯಯನ ನಡೆಸಿದ ಅವರು ಏಕ ಕೋಶ (ಯೀಸ್ಟ್) ನಿಂದ ಬಹುಕೋಶದ (ಮಶ್ರೂಮ್) ಶಿಲೀಂದ್ರಗಳಿರುತ್ತವೆ. ಬ್ರೆಡ್, ವೈನ್, ಬಿಯರ್ ಇತ್ಯಾದಿಗಳ ತಯಾರಿಕೆಯಲ್ಲಿ ಯೀಸ್ಟ್ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅಣಬೆ ಸೇರಿದಂತೆ ಕೆಲವು ಸಸ್ಯಗಳ ಬೆಳವಣಿಗೆಯನ್ನು ಶಿಲೀಂದ್ರಗಳು ಉತ್ತೇಜಿಸುತ್ತವೆ. ಆಯ್ದ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳ ಜೊತೆಗೆ ಮೈಕೋರೈಜಲ್ ಶಿಲೀಂಧ್ರಗಳ ಬಳಕೆಯಿಂದಾಗಿ ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಕಡಿಮೆ ಮಾಡಬಹುದಾಗಿದೆ. ಇದರಿಂದಾಗಿ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ ಎಂದು ಅವರು ಅಧ್ಯಯನದ ಮೂಲಕ ಪತ್ತೆಹಚ್ಚಿದ್ದರು.
ಕೃಷಿ, ತೋಟಗಾರಿಕೆ ಮತ್ತು ಅರಣ್ಯೀಕರಣದಲ್ಲಿ ಪ್ರಮುಖ ಬೆಳೆಗಳ ಬೆಳವಣಿಗೆ, ಪೋಷಣೆ ಮತ್ತು ಇಳುವರಿಯನ್ನು ಉತ್ತೇಜಿಸುವ ಮೈಕೋರೈಜಲ್ ಶಿಲೀಂಧ್ರಗಳ ಬಗ್ಗೆ ಹಾಗು ಜಾಗತಿಕ ಮಣ್ಣಿನ ಜೀವವೈವಿಧ್ಯತೆ ಅಧ್ಯಯನ ನಡೆಸಲು ೨೦೧೬ ರಲ್ಲಿ ಎಫ್‌ಎಒ ಆಹ್ವಾನಿಸಿದ ಭಾರತದ ಏಕೈಕ ವಿಜ್ಞಾನಿ ಜೋಸೆಫ್ ಭಾಗ್ಯರಾಜ್ ಆಗಿದ್ದಾರೆ.
ಏಷ್ಯನ್ ಮೈಕೋಲಾಜಿಕಲ್ ಅಸೋಸಿಯೇಷನ್ ೨೬ ದೇಶಗಳಲ್ಲಿ ಪ್ರತಿ ವಿಶೇಷ ಮೈಕೋಲಾಜಿಸ್ಟ್ ಗಳಿಗೆ ಡಿಸ್ಟಿಂಗ್ವಿಷ್ಡ್ ಏಷ್ಯನ್ ಮೈಕಾಲಜಿಸ್ಟ್ ಅವಾರ್ಡ್ ಗೆ ನಾಮನಿರ್ದೇಶನ ಮಾಡುವಂತೆ ಆಹ್ವಾನಿಸಿತ್ತು. ಮೈಕೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ, ಡಾ.ಡಿ.ಜೋಸೆಫ್ ಬಾಗ್ಯರಾಜ್ ಅವರನ್ನು ಭಾರತದಿಂದ ಈ ಪ್ರಶಸ್ತಿಗೆ ಸೂಚಿಸಿತ್ತು. ಸಮಿತಿಯು ೭೮ರ ಹರೆಯದ ಡಾ. ಡಿ. ಜೋಸೆಫ್ ಭಾಗ್ಯರಾಜ್ ಅವರನ್ನು ಈ ಬಾರಿಯ ಪ್ರಶಸ್ತಿಗೆ ಆಯ್ಕೆ ಮಾಡಿತು. ಇತ್ತೀಚೆಗೆ ಜಪಾನ್ ದೇಶದ ಮಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಸಮ್ಮೇಳನದಲ್ಲಿ ಭಾಗ್ಯರಾಜ್ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭಾಗ್ಯರಾಜ್ ಅವರು ಬೆಂಗಳೂರಿನ ಜಿಕೆವಿಕೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕೃಷಿ ಸೂಕ್ಷ್ಮ ಜೀವವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಅವರು ಐಎನ್‌ಎಸ್‌ಎ ಗೌರವ ವಿಜ್ಞಾನಿ ಮತ್ತು ನೈಸರ್ಗಿಕ ಜೈವಿಕ ಸಂಪನ್ಮೂಲ ಮತ್ತು ಸಮುದಾಯ ಅಭಿವೃದ್ಧಿ ಕೇಂದ್ರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೂಕ್ಷ್ಮ ಜೀವವಿಜ್ಞಾನದಲ್ಲಿ ಅವರು ನಡೆಸಿದ ನಿರಂತರ ಸಂಶೋಧನೆಗಾಗಿ ಅವರು ಆನೇಕ ಪ್ರಶಸ್ತಿ-ಪುರಸ್ಕಾರಗಳಿಗೂ ಭಾಜನರಾಗಿದ್ದಾರೆ.
ಈ ಹಿಂದೆ ಅವರು ಮಣ್ಣು ಕುರಿತು ಈ ಅಟ್ಲಾಸ್ ರಚನೆಯ ಕಾರ್ಯಾಗಾರದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು.

Leave a Comment