ಡಿಸಿಸಿ ಬ್ಯಾಂಕ್‌ನಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ

ತುಮಕೂರು, ಮೇ ೨೩- ಕಳೆದ 2 ತಿಂಗಳಿನಿಂದ ಕೊರೊನಾ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಾದ್ಯಂತ ತೀವ್ರ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ 1 ಸಾವಿರದಿಂದ 10 ಸಾವಿರದ ವರೆಗೆ ಸಾಲ ಸೌಲಭ್ಯ ನೀಡಲು ಡಿಸಿಸಿ ಬ್ಯಾಂಕ್ ಮುಂದಾಗಿದೆ.

ಇಲ್ಲಿನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಅವರು ಸುಮಾರು 60 ಜನ ಬೀದಿ ಬದಿ ವ್ಯಾಪಾರಿಗಳಿಗೆ ನೇರವಾಗಿ ಅವರುಗಳ ಶೂನ್ಯ ಉಳಿತಾಯ ಖಾತೆಗೆ ಸಾಲದ ಮೊತ್ತವನ್ನು ಜಮಾ ನೀಡಿರುವ ಆದೇಶ ಪತ್ರಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಾದ್ಯಂತ ಇರುವ ಬೀದಿ ಬದಿ ವ್ಯಾಪಾರಸ್ಥರು ಆರ್ಥಿಕ ಮುಗ್ಗಟ್ಟಿನಿಂದ ಕಷ್ಟಪಡುತ್ತಿದ್ದಾರೆ. ಜೀವನೋಪಾಯಕ್ಕೆ ಅನ್ಯ ಮಾರ್ಗವಿಲ್ಲದೆ ಖಾಸಗಿ ಲೇವಾದೇವಿ ಸಂಸ್ಥೆಯ ಶೋಷಣೆಗೆ ಒಳಗಾಗುತ್ತಿರುವುದನ್ನು ಅರಿತು ಬ್ಯಾಂಕ್ ಆಡಳಿತ ಮಂಡಳಿ ಈ ವ್ಯಾಪಾರಸ್ಥರಿಗೆ 1 ಸಾವಿರದಿಂದ 10 ಸಾವಿರದ ವರೆಗೆ ಸಾಲ ಸೌಲಭ್ಯ ನೀಡಲು ತೀರ್ಮಾನ ಕೈಗೊಂಡಿದೆ ಎಂದರು.

ಸಣ್ಣ ಮತ್ತು ಅತಿಸಣ್ಣ ಬೀದಿ ಬದಿ ವ್ಯಾಪಾರಸ್ಥರನ್ನು ಆರ್ಥಿಕವಾಗಿ ಪುನಶ್ಚೇತನಗೊಳಿಸಲು ಇವರುಗಳು ಮಾಡುವ ವ್ಯಾಪಾರಕ್ಕನುಸಾರ ಹಣಕಾಸಿನ ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲ ನೀಡಲಾಗುವುದು ಎಂದು ಹೇಳಿದರು.

ಬ್ಯಾಂಕ್‌ ಯಾವುದೇ ರೀತಿಯ ಆಧಾರ ಇಲ್ಲದೇ ಬೀದಿ ಬದಿ ವ್ಯಾಪಾರಿಗಳಿಗೆ ಬಡವರ ಬಂಧು ಯೋಜನೆಯಡಿ ಸಾಲದ ಚೆಕ್‌ಗಳನ್ನು ನೇರವಾಗಿ ಅವರ ಖಾತೆಗಳಿಗೆ ಜಮಾ ಮಾಡಲಿದೆ ಎಂದರು.

ಇಂದು ಬೀದಿ ಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಇದರಿಂದ ಜಿಲ್ಲೆಯ ಎಲ್ಲ ಕಡೆ ಇರುವ ಬೀದಿ ಬದಿ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಜಿಲ್ಲೆಯ 10 ತಾಲ್ಲೂಕುಗಳ ನಿರ್ದೇಶಕರು ತಮ್ಮ ವ್ಯಾಪ್ತಿಗೆ ಬರುವ ಬೀದಿ ಬದಿ ವ್ಯಾಪಾರಸ್ಥರುಗಳಿಗೆ ತಾವುಗಳೇ ಸಾಲದ ಚೆಕ್ ವಿತರಿಸಬಹುದು. ಇದಕ್ಕಾಗಿ ಅಧ್ಯಕ್ಷರನ್ನು ಕಾಯುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬ್ಯಾಂಕ್‌ ನಿರ್ದೇಶಕರಾದ ಬಿ. ಶಿವಣ್ಣ, ನರಸಿಂಹಯ್ಯ, ಎಸ್. ಲಕ್ಷ್ಮೀನಾರಾಯಣ, ಜಿ.ಜೆ. ರಾಜಣ್ಣ, ಎಸ್.ಆರ್. ರಾಜಕುಮಾರ್, ಆರ್. ರಾಜೇಂದ್ರ, ಬಿ.ಎಸ್. ದೇವರಾಜು, ಹೆಚ್.ಟಿ. ತಿಮ್ಮರಾಜು, ಟಿ.ಪಿ. ಮಂಜುನಾಥ್, ಬ್ಯಾಂಕ್ ಅಧಿಕಾರಿಗಳಾದ ಜಂಗಮಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್. ಕುಬೇಂದ್ರನಾಯ್ಕ, ಬ್ಯಾಂಕ್‌ ಮಹಾಪ್ರಬಂಧಕ ಪಿ.ಎಸ್. ರಾಮಕೃಷ್ಣನಾಯಕ್, ತಾಲ್ಲೂಕು ಮೇಲ್ವಿಚಾರಕರಾದ ಮಧುಸೂಧನ್ ಮತ್ತಿತರರು ಉಪಸ್ಥಿತರಿದ್ದರು.

Leave a Comment