ಡಿಕೆ ಶಿವಕುಮಾರ್ ದೆಹಲಿ ನಿವಾಸದ ಮೇಲೆ ಸಿಬಿಐ ದಾಳಿ

ನವದೆಹಲಿ,ಅ 21- ಅಕ್ರಮ ಹಣ ಪತ್ತೆ ಪ್ರಕರಣದಂತೆ ಜಾರಿ ನಿರ್ದೇಶನಾಲಯದಿಂದ ತನಿಖೆ ಎದುರಿಸುತ್ತಿದ್ದು ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ದೆಹಲಿಯ ಸಫ್ದರ್ ಜಂಗ್ ರಸ್ತೆಯಲ್ಲಿರುವ ಡಿ.ಕೆ.ಶಿವಕುಮಾರ್ ಒಡೆತನದ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಪ್ರಕರಣದ ಮಾಹಿತಿಯನ್ನು ಸಿಬಿಐ ಜತೆ ಹಂಚಿಕೊಂಡಿದ್ದೇವೆ ಎಂದು ಇ.ಡಿ.ಅಧಿಕಾರಿಗಳು ದೆಹಲಿಯ ಹೈ ಕೋರ್ಟ್ ಗೆ ತಿಳಿಸಿದ್ದರು.

ಡಿ.ಕೆ.ಶಿವಕುಮಾರ್ ಅವರ ಫ್ಲ್ಯಾಟ್ ಮೇಲೆ 2017ರಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.ಆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಹೊಸ ಮನೆಯೊಂದನ್ನು ಖರೀದಿ ಮಾಡಿದ್ದರು.ಈಗ ಅದೇ ಮನೆಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇದೀಗ ಪ್ರಕರಣವನ್ನು ಸಿಬಿಐ ಅಧಿಕಾರಿಗಳು ಕೈಗೆತ್ತಿಕೊಂಡಿರುವುದು ಬಹುತೇಕ ಖಚಿತವಾಗಿದೆ.

ಕಳೆದ ಒಂದೂವರೆ ತಿಂಗಳಿಂದಲೂ ಡಿ.ಕೆ.ಶಿವಕುಮಾರ್ ಇ.ಡಿ.ವಿಚಾರಣೆ ಎದುರಿಸುತ್ತ ತಿಹಾರ್ ಜೈಲಿನಲ್ಲಿದ್ದಾರೆ. ದೆಹಲಿ ಕೋರ್ಟ್ನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ.

ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಬಗ್ಗೆ ಪ್ರತಿಕ್ರಿಯಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿರೋಧ ಪಕ್ಷದ ನಾಯಕರನ್ನು ಟಾರ್ಗೆಟ್ ಮಾಡಿ ಪದೇ ಪದೇ ಕೇಂದ್ರೀಯ ತನಿಖಾ ಸಂಸ್ಥೆಗಳು ದಾಳಿ ನಡೆಸಲಾಗುತ್ತಿದೆ. ನಿಜವಾಗಿ ತಪ್ಪು ಮಾಡಿದ್ದರೆ ನಿಷ್ಪಕ್ಷಪಾತ ವಾಗಿ ತನಿಖೆ ನಡೆಯಲಿ.ಆದರೆ ದ್ವೇಷದ ರಾಜಕಾರಣಕ್ಕೆ ಇ.ಡಿ., ಸಿಬಿಐ ಬಳಕೆಯಾಗುವುದು ಬೇಡ ಎಂದಿದ್ದಾರೆ.

ಮಾಜಿ ಸಚಿವರ ರಾಮಲಿಂಗಾರೆಡ್ಡಿ ಮಾತನಾಡಿದ್ದು, ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ದಾಳಿ ಆಗಿದ್ದು ಈಗಷ್ಟೇ ಗಮನಕ್ಕೆ ಬಂದಿದೆ.ಇನ್ನೂ ಸಂಪೂರ್ಣವಾಗಿ ಆ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಎಚ್.ಕೆ. ಪಾಟೀಲ್ ಮಾತನಾಡಿ, ಇಡಿ,ಐಟಿ ,ಸಿಬಿಐ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳನ್ನು ದಮನ ಮಾಡುವುದಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಇದು ಯಾವುದು ಆರೋಗ್ಯಕರ ಅಲ್ಲ,ಇದರಿಂದ ಪ್ರಜಾಪ್ರಭುತ್ವ ರಕ್ಷಣೆ ಮಾಡಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

Leave a Comment