ಡಿಕೆಶಿ ಬಂಧನ ವಿರೋಧಿಸಿ ಕಾಂಗ್ರೆಸ್ ಱ್ಯಾಲಿ

ಬೆಂಗಳೂರು, ಸೆ. ೧೦- ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರ ಇಡಿ ಬಂಧನ ವಿರೋಧಿಸಿ ನಾಳೆ ನಗರದಲ್ಲಿ ಕಾಂಗ್ರೆಸ್ ಪಕ್ಷ ಬೃಹತ್ ಪ್ರತಿಭಟನಾ ಱ್ಯಾಲಿ ಹಮ್ಮಿಕೊಂಡಿದೆ.

ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಅವರು ಸುದ್ದಿಗೋಷ್ಠಿಯಲ್ಲಿ ಱ್ಯಾಲಿಯ ಬಗ್ಗೆ ವಿವರ ನೀಡಿ, ನ್ಯಾಷನಲ್ ಕಾಲೇಜಿನಿಂದ ಪ್ರೀಡಂ ಪಾರ್ಕ್‌ವರೆಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಱ್ಯಾಲಿ ನಡೆಸಲಿದ್ದಾರೆ ಎಂದರು.

ಶಾಸಕ ಡಿ.ಕೆ. ಶಿವಕುಮಾರ್ ಅವರ ಇಡಿ ಬಂಧನ ವಿರೋಧಿಸಿ ಈ ಱ್ಯಾಲಿ ಹಮ್ಮಿಕೊಂಡಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಯಲಿದೆ. ಈ ಸಂಬಂಧ ಎಲ್ಲ ಮುಖಂಡರು, ಕಾರ್ಯಕರ್ತರಿಗೂ ಸೂಚನೆ ನೀಡಿದ್ದೇವೆ ಎಂದು ಅವರು ಹೇಳಿದರು. ಕೇಂದ್ರದ ಬಿಜೆಪಿ ಸರ್ಕಾರ ಪ್ರತಿಪಕ್ಷಗಳನ್ನು ಮುಗಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹರಿಹಾಯ್ದರು.

ಆದಾಯ ತೆರಿಗೆ ಇಲಾಖೆ, ಇಡಿ, ಸಿಬಿಐ ಎಲ್ಲವೂ ಕೇಂದ್ರದ ಸುಪರ್ದಿಯಲ್ಲಿವೆ. ಈ ತನಿಖಾ ಸಂಸ್ಥೆಗಳು ಬಿಜೆಪಿ ನಿರ್ದೇಶನದಂತೆ ಕೆಲಸ ಮಾಡುವುದನ್ನು ಬಿಡಬೇಕು ಎಂದು ಅವರು ಹೇಳಿದರು.

ಮಾಜಿ ಸಚಿವ ಹಾಗೂ ಶಾಸಕ ಡಿ.ಕೆ. ಶಿವಕುಮಾರ್ ತಪ್ಪು ಮಾಡಿದ್ದಾರೆ ಎಂದು ಅವರನ್ನು ಬಂಧಿಸಿಲ್ಲ. ವಿಚಾರಣೆಗಾಗಿ ಅವರನ್ನು ಬಂಧಿಸಲಾಗಿದೆ. ಇದು ಸರಿಯಲ್ಲ. ದುರುದ್ದೇಶದಿಂದ ಡಿ.ಕೆ. ಶಿವಕುಮಾರ್ ಅವರಿಗೆ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.

ದೆಹಲಿಯ ಪ್ಲಾಟ್‌ನಲ್ಲಿ ಆದಾಯ ತೆರಿಗೆ ದಾಳಿ ಸಂದರ್ಭದಲ್ಲಿ ಸಿಕ್ಕ 8.5 ಕೋಟಿ ರೂ. ಹಣ ತಮ್ಮದು ಎಂದು ಸುನೀಲ್ ಶರ್ಮ ಅವರೇ ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಅದು ಡಿ.ಕೆ. ಶಿವಕುಮಾರ್ ಅವರಿಗೆ ಸೇರಿದ ಹಣ ಎಂದು ಕಸ್ಟಡಿಗೆ ತೆಗೆದುಕೊಂಡಿರುವುದು ಸರಿಯಲ್ಲ ಎಂದರು.

ಬಿಜೆಪಿಯವರು ಕೆಟ್ಟ ಸಂಪ್ರದಾಯವನ್ನು ದೇಶದಲ್ಲಿ ಬೆಳೆಸುತ್ತಿದ್ದಾರೆ. ಇದು ಮುಂದೊಂದು ದಿನ ಅವರಿಗೆ ಶಾಪವಾಗಲಿದೆ ಎಂದು ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಪ್ರವಾಹದಿಂದ ಸಾವಿರಾರು ಕೋಟಿ ರೂ. ನಷ್ಟ ಸಂಭವಿಸಿದ್ದು, ಜನ ಅನ್ನ, ನೀರಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಆದರೆ ಕೇಂದ್ರ ಸರ್ಕಾರ ಒಂದು ಪೈಸೆಯ ನೆರವನ್ನು ನೀಡಿಲ್ಲ ಎಂದು ಅವರು ದೂರಿದರು.

Leave a Comment