ಡಿಕೆಶಿ ಬಂಧನ ಬಿಜೆಪಿ ಪಾತ್ರವಿಲ್ಲ: ಡಿಸಿಎಂ

ತುಮಕೂರು, ಸೆ. ೧೦- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿಚಾರದಲ್ಲಿ ತನಿಖೆ ಕಾನೂನು ಚೌಕಟ್ಟಿನಲ್ಲಿಯೇ ಸಾಗುತ್ತಿದ್ದು, ಇದರಲ್ಲಿ ಬಿಜೆಪಿಯ ಪಾತ್ರವಿಲ್ಲ ಎಂದು ಉಪಮುಖ್ಯಮಂತ್ರಿ ಡಾಅಶ್ವತ್ಥ್‌ನಾರಾಯಣ್ ಸ್ಪಷ್ಟಪಡಿಸಿದರು.
ತುರುವೇಕೆರೆ ಮಾರ್ಗವಾಗಿ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿ ನಿರ್ಮಿತವಾಗಿರುವ ಶ್ರೀ ಕಾಲಭೈರವೇಶ್ವರ ಸಮುದಾಯ ಭವನದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ವೇಳೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂವಿಧಾನದ ಎದುರು ಎಲ್ಲರೂ ಸಮಾನರು, ಕಾನೂನನ್ನು ಎಲ್ಲರೂ ಗೌರವಿಸಬೇಕು, ಡಿ.ಕೆ. ಶಿವಕುಮಾರ್ ತಪ್ಪು ಮಾಡಿಲ್ಲದಿದ್ದರೆ ಹೊರ ಬರುತ್ತಾರೆ. ಆದರೆ ಈ ವಿಚಾರಕ್ಕೆ ರಾಜಕೀಯ ಲೇಪನ ಹಚ್ಚುವ ಅವಶ್ಯಕತೆಯಿಲ್ಲ ಎಂದರು.
ನಮ್ಮ ದೇಶದ ಕಾನೂನು ಸಾಮಾನ್ಯನಿಂದ ಹಿಡಿದು ಕೋಟ್ಯಾಧಿಪತಿಗೂ ಒಂದೇ ಇದೆ. ಕಾನೂನನ್ನು ನಾವುಗಳು ಗೌರವಿಸಬೇಕು ಎಂದರು.
ಮುಂದಿನ ಎರಡು ತಿಂಗಳಲ್ಲಿ ಸಂಪುಟ ವಿಸ್ತರಣೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಅವರು ಹೇಳಿದರು.
ಸ್ಥಳೀಯ ಶಾಸಕ ಮಸಾಲೆ ಜಯರಾಮ್, ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಗಂಗಣ್ಣ, ವಿ.ಬಿ. ಸುರೇಶ್, ಕಾಳಂಜೀಹಳ್ಳಿ ಸೋಮಣ್ಣ, ವಿ.ಟಿ.ವೆಂಕಟರಾಮ್, ಮಿಥುನ್‍ಹನುಮಂತೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Comment