ಡಿಕೆಶಿ ಬಂಧನ ಒಕ್ಕಲಿಗರ ಆಕ್ರೋಶ : ಕೇಂದ್ರಕ್ಕೆ ಧಿಕ್ಕಾರ, ಆತ್ಮಸ್ಥೈರ್ಯ ತುಂಬಿದ ಪ್ರತಿಭಟನಾಕಾರರು, ಸಂಚಾರ ಅಸ್ತವ್ಯಸ್ತ

ಬೆಂಗಳೂರು, ಸೆ. ೧೧- ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವ ಕ್ರಮವನ್ನು ಖಂಡಿಸಿ, ರಾಜ್ಯದ ಒಕ್ಕಲಿಗ ಸಮುದಾಯ, ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಶಿವಕುಮಾರ್ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಯತ್ನಿಸಿದ್ದಲ್ಲದೆ, ”ನಿಮ್ಮೊಂದಿಗೆ ನಾವಿದ್ದೇವೆ, ಧೃತಿಗೆಡಬೇಡಿ” ಎಂಬ ಸಂದೇಶ ರವಾನಿಸಿದೆ.

  •  ಡಿಕೆಶಿ ಪರವಾಗಿ ಬೀದಿಗಿಳಿದ ಒಕ್ಕಲಿಗ ಸಮುದಾಯ.
  •  ಕೇಂದ್ರ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ.
  •  ಜಾರಿ ನಿರ್ದೇಶನಾಲಯದ ದುರ್ಬಳಕೆಗೂ ತೀವ್ರ ಟೀಕೆ.
  •  ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಮೊಳಗಿದ ಧಿಕ್ಕಾರದ ಘೋಷಣೆ.
  •  ಕಾಂಗ್ರೆಸ್ ಸೇರಿದಂತೆ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗಿ.
  •  ಕನ್ನಡ ಪರ ಸಂಘಟನೆಗಳು ಸೇರಿ, 50ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ.

ಬೆಳಿಗ್ಗೆಯಿಂದಲೇ ರಾಜ್ಯದ ಮೂಲೆಮೂಲೆಗಳಿಂದ ಆಗಮಿಸಿದ್ದ ಒಕ್ಕಲಿಗರು, ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಸಭೆ ಸೇರಿ ಅಲ್ಲಿಂದ ಪ್ರಮುಖ ರಸ್ತೆಗಳಲ್ಲಿ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಒಕ್ಕಲಿಗರ ಬೃಹತ್ ಪ್ರತಿಭಟನೆಯಿಂದಾಗಿ ನಗರದ ಹೃದಯ ಭಾಗದ ಹಲವಾರು ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್, ಬಹುಮಹಡಿ ಕಟ್ಟಡ, ಸಿವಿಲ್ ನ್ಯಾಯಾಲಯಗಳ ಕಟ್ಟಡ ಸೇರಿದಂತೆ, ವಿವಿಧ ಕಚೇರಿಗಳಿಗೆ ತೆರಳುವ ನೌಕರರು ಪ್ರತಿಭಟನೆಯ ಬಿಸಿ ಅನುಭವಿಸಬೇಕಾಯಿತು. ನಿಗದಿತ ಕಾಲಕ್ಕೆ ಕಚೇರಿಗಳಿಗೆ ತೆರಳಲು ಹರಸಾಹಸ ಮಾಡಿದರು. ಹೊರಊರುಗಳಿಂದ ಬಂದಿದ್ದ ಜನರು ಪ್ರತಿಭಟನೆಯ ನಡುವೆ ಸಿಲುಕಿ ಹೈರಾಣಾದರು.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಆಟೋ ರಿಕ್ಷಾ, ಖಾಸಗಿ ಬಸ್‌ಗಳು ಸೇರಿದಂತೆ, ದ್ವಿಚಕ್ರ ಸವಾರರು, ಪ್ರತಿಭಟನೆಯ ನಡುವೆ ಸಿಲುಕಿಕೊಂಡು ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲಾ ಪ್ರಮುಖ ರಸ್ತೆಗಳಲ್ಲಿ ವಾಹನಗಳು ಇರುವೆ ಸಾಲಿನಂತೆ, ಸಾಲಾಗಿ ನಿಂತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ನಾಯಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಬೆಂಬಲವಾಗಿ ನಿಂತರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣಬೈರೇಗೌಡ, ಚೆಲುವರಾಯ ಸ್ವಾಮಿ, ನರೇಂದ್ರ ಸ್ವಾಮಿ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ರಾಜೀವ್ ಗೌಡ, ಎಲ್.ಆರ್. ಶಿವರಾಮೇಗೌಡ, ಶಾಸಕರಾದ ಸೌಮ್ಯ ರೆಡ್ಡಿ, ಮಾಜಿ ಶಾಸಕ ಬಾಲಕೃಷ್ಣ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ, ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಹಾಸನ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚನ್ನರಾಯಪಟ್ಟಣ, ತುಮಕೂರು, ಚಿತ್ರದುರ್ಗ ಸೇರಿದಂತೆ, ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಒಕ್ಕಲಿಗರು, ಶಿವಕುಮಾರ್ ಅವರ ಬೆನ್ನಿಗೆ ನಿಂತರು.

ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಪೊಲೀಸರು ವ್ಯಾಪಕ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಒಕ್ಕಲಿಗರ ಸಂಘ – ಸಂಸ್ಥೆಗಳ ಒಕ್ಕೂಟ ಕರೆನೀಡಿದ್ದ ಪ್ರತಿಭಟನಾ ಱ್ಯಾಲಿಗೆ ಒಕ್ಕಲಿಗ ಸಮುದಾಯ ಬೆಂಬಲವಾಗಿ ನಿಂತಿದ್ದು, ಪ್ರತಿಭಟನೆಯಲ್ಲಿ ಸೇರಿದ್ದ ಸಹಸ್ರಾರು ಮಂದಿ ಸಾಕ್ಷಿಯಾಗಿದ್ದರು.

ಧಿಕ್ಕಾರ ಘೋಷಣೆ
ಮೆರವಣಿಗೆಯುದ್ದಕ್ಕೂ ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಡಿ.ಕೆ. ಶಿವಕುಮಾರ್ ಭಾವಚಿತ್ರಗಳನ್ನು ಹಿಡಿದು ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರಿದರು.
ಪ್ರತಿಭಟನೆಯಲ್ಲಿ ನಾಡಪ್ರಭು ಕೆಂಪೇಗೌಡ ಪೋಷಾಕು ಧರಿಸಿದ್ದ ವ್ಯಕ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.

ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘ, ವಿಶ್ವ ಒಕ್ಕಲಿಗರ ಮಹಾವೇದಿಕೆ, ರಾಜ್ಯ ಒಕ್ಕಲಿಗರ ಸಂಘ ಸೇರಿದಂತೆ, 50ಕ್ಕೂ ಹೆಚ್ಚು ಒಕ್ಕಲಿಗರ ಸಂಘಟನೆಗಳ ಕಾರ್ಯಕರ್ತರು, ಪದಾಧಿಕಾರಿಗಳು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಪೂರ್ವಕವಾಗಿ ಬಂಧಿಸಿ, ವಿಚಾರಣೆಗೆ ಒಳಪಡಿಸಿರುವ ಜಾರಿ ನಿರ್ದೇಶನಾಲಯದ ಕ್ರಮವನ್ನು ರಾಜ್ಯ ಒಕ್ಕಲಿಗರ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

 

Leave a Comment