ಡಿಕೆಶಿ – ಪರಂ ಮಹತ್ವದ ಚರ್ಚೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ಸೆ. ೧೪- ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಆಂತರಿಕ ಬೇಗುದಿಗಳಿಗೆ ಮದ್ದು ಅರೆಯಲು ಕಾಂಗ್ರೆಸ್ ವರಿಷ್ಠ ನಾಯಕರು ರಂಗ ಪ್ರವೇಶ ಮಾಡಿರುವಾಗಲೇ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದು ಸಭೆ ನಡೆಸಿ, ಮಹತ್ವದ ಚರ್ಚೆ ನಡೆಸಿದರು.

ರಾಜ್ಯ ಕಾಂಗ್ರೆಸ್‌ನ ಭಿನ್ನಮತ ಹಾಗೂ ಆಂತರಿಕ ಬೇಗುದಿಗಳನ್ನು ಶಮನ ಮಾಡಲೆಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಈ ಇಬ್ಬರೂ ನಾಯಕರು ಇಂದು ಚರ್ಚೆ ನಡೆಸಿದರು.

ಸದಾಶಿವನಗರದಲ್ಲಿರುವ ಸಚಿವ ಡಿ.ಕೆ. ಶಿವಕುಮಾರ್, ನಿವಾಸಕ್ಕೆ ಇಂದು ಬೆಳಗ್ಗೆ ಆಗಮಿಸಿದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕಾಂಗ್ರೆಸ್ ಪಕ್ಷದ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸುವ ನಿಟ್ಟಿನಲ್ಲಿ ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ವಿಚಾರವನ್ನು ಮುಂದಿಟ್ಟುಕೊಂಡು ಜಾರಕಿಹೊಳಿ ಬ್ರದರ್ಸ್ ಕೆಲ ಶಾಸಕರ ಜತೆ ಸೇರಿ ಸಮ್ಮಿಶ್ರ ಸರ್ಕಾರದ ಬುಡವನ್ನೇ ಅಲ್ಲಾಡಿಸುವರಷ್ಟ ಮಟ್ಟಿಗೆ ಚಟುವಟಿಕೆಗಳನ್ನು ನಡೆಸಿರುವುದು ಬಿಜೆಪಿ ನಾಯಕರು ಕಾಂಗ್ರೆಸ್‌ನ ಬೆಳವಣಿಗೆಗಳ ಲಾಭ ಪಡೆಯಲು ಸಿದ್ಧವಾಗಿ ಕುಳಿತಿರುವ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರು ಸಭೆ ನಡೆಸಿ, ಅಸಮಾಧಾನಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸಿದರು. ಈ ಚರ್ಚೆಯಲ್ಲಿ ಕೆಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಪಾಲ್ಗೊಂಡಿದ್ದರು.

Leave a Comment