ಡಿಕೆಶಿಗೆ ಧೈರ್ಯ ತುಂಬಿದ ಸೋನಿಯಾ

ನವದೆಹಲಿ, ಅ. ೨೩- ಜಾರಿ ನಿರ್ದೇಶನಾಲಯದಿಂದ ಕಳೆದ ಸೆಪ್ಟೆಂಬರ್ 3 ರಂದು ಬಂಧಿತರಾಗಿ ತಿಹಾರ್ ಜೈಲಿನಲ್ಲಿರುವ ಕರ್ನಾಟಕದ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದು ಬೆಳಿಗ್ಗೆ ಭೇಟಿಮಾಡಿ, ಯಾವುದೇ ಕಾರಣಕ್ಕೂ ದೃತಿಗೆಡಬೇಡಿ, ಇಡೀ ಪಕ್ಷ ನಿಮ್ಮೊಂದಿಗೆ ಇದೆ ಎಂದು ಹೇಳುವ ಮೂಲಕ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಶಿವಕುಮಾರ್ ಅವರನ್ನು ಭೇಟಿಮಾಡುವ ಮೂಲಕ ಯಾವುದೇ ನಾಯಕರು ಆಪತ್ತಿಗೆ ಸಿಲುಕಿದಾಗ ಪಕ್ಷ ಅವರ ಪರವಾಗಿ ನಿಲ್ಲುತ್ತದೆ ಎಂಬ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸುವ ಉದ್ದೇಶದಿಂದ ಸೋನಿಯಾ ಅವರ ಭೇಟಿ ನಡೆದಿದೆ. ಅವರೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಉಪಸ್ಥಿತರಿದ್ದರು.

ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ನಿಮ್ಮ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಕಾನೂನು ಹೋರಾಟ ಮುಂದುವರೆಸಿ, ಅದರಲ್ಲಿ ಜಯ ದೊರೆತು, ಆರೋಪ ಮುಕ್ತರಾಗಿ ಹೊರಬರುತ್ತೀರಿ ಎಂಬ ವಿಶ್ವಾಸದ ಮಾತುಗಳನ್ನು ಸೋನಿಯಾ ಅವರು ಶಿವಕುಮಾರ್ ಅವರಿಗೆ ಹೇಳಿದ್ದಾರೆ.

ಐಎನ್‌ಎಕ್ಸ್ ಮೀಡಿಯಾ ಹಗರಣದಲ್ಲಿ ಬಂಧಿತರಾಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರನ್ನು ಕಳೆದ ತಿಂಗಳು ಭೇಟಿಮಾಡಿದ್ದ ಸೋನಿಯಾ ಗಾಂಧಿ ಇದೇ ರೀತಿ ಧೈರ್ಯ ತುಂಬಿದ್ದರು.

ಮೊನ್ನೆ ತಾನೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಶಿವಕುಮಾರ್ ಅವರನ್ನು ಭೇಟಿಮಾಡಿ, ಮನೋಬಲ ತುಂಬಲು ಯತ್ನಿಸಿದ್ದರು. ಜೊತೆಗೆ ಜೈಲಿನಲ್ಲಿರುವ ಶಿವಕುಮಾರ್ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಕಳಂಕರಹಿತರಾಗಿ ಹೊರಬರುವ ವಿಶ್ವಾಸವನ್ನು ಹೊಂದಿದ್ದಾರೆ ಎಂದು ಜೈಲಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದ್ದರು.

ದೆಹಲಿಯ ಶಿವಕುಮಾರ್ ಅವರ ನಿವಾಸದಲ್ಲಿ 8.82 ಕೋಟಿ ರೂ. ನಗದು ಹಣ ದೊರೆತ ಹಿನ್ನೆಲೆ ಮತ್ತು ತೆರಿಗೆ ವಂಚನೆ ಮಾಡಿದ್ದಾರೆಂಬ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ಸೆ. 3 ರಂದು ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಆರೋಪದ ಅಡಿಯಲ್ಲೂ ಅವರನ್ನು ತೀವ್ರವಿಚಾರಣೆಗೆ ಒಳಪಡಿಸಲಾಗಿದೆ.

ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಅಲ್ಲಿನ ಕಾಂಗ್ರೆಸ್ ಶಾಸಕರು, ಬಿಜೆಪಿಯ ಆಸೆ – ಆಮಿಷಗಳಿಗೆ ಬಲಿಯಾಗದಂತೆ ನೋಡಿಕೊಳ್ಳಲು ಅವರಿಗೆ ಬಿಡದಿ ಸಮೀಪದ ರೆಸಾರ್ಟ್ ಒಂದರಲ್ಲಿ ಆಶ್ರಯ ಕಲ್ಪಿಸಿದ್ದರೆಂಬ ಕಾರಣಕ್ಕೆ ಬಿಜೆಪಿ ನಾಯಕರು, ಅವರ ವಿರುದ್ಧ ಐಟಿ ಮತ್ತು ಜಾರಿ ನಿರ್ದೇಶನಾಲಯದ ಮುಖಾಂತರ ತನಿಖೆ ನಡೆಸಲು ಮುಂದಾಗಿದ್ದರೆಂಬ ಆರೋಪ ಕಾಂಗ್ರೆಸ್ ವಲಯದಲ್ಲಿ ಕೇಳಿಬಂದಿದೆ.

Leave a Comment