ಡಾ. ಸಿ. ಅಶ್ವಥ್ ಇಲ್ಲದ 10 ವರ್ಷ

ಡಿಸೆಂಬರ್ 19 ಕ್ಕೆ ಡಾ. ಸಿ. ಅಶ್ವಥ್ ನಮ್ಮಿಂದ ದೂರವಾಗಿ ೧೦ ವರ್ಷ. ಅವರಿದ್ದಿದ್ದರೆ ಇನ್ನಷ್ಟು ಹೊಸ ಕವಿತೆಗಳು ಹಾಡಾಗಿ ಜೀವ ತಳೆದು ಸುಗಮ ಸಂಗೀತ ಲೋಕಕ್ಕೆ ಅಭೂತಪೂರ್ವ ಕೊಡುಗೆ ನೀಡುತ್ತಿದ್ದವು. ಅವರಿಲ್ಲ. ಅವರಷ್ಟೇ ಅದ್ಭುತವಾಗಿ ಹಾಡುವವರು ಮತ್ತೊಬ್ಬರು ಬರಲಿಲ್ಲ.

ಅವರೊಬ್ಬ ಅಪ್ರತಿಮ ಗಾಯಕ, ಸ್ವರ ಸಂಯೋಜಕ. ಹಾಡಲು, ಸ್ವರ ಸಂಯೋಜಿಸಲು ಕುಳಿತಾಗಲೂ ಅಷ್ಟೆ, ತಮಗೆ ಸರಿ ಹೊಂದುವವರೆಗೆ ಬಿಡುತ್ತಿರಲಿಲ್ಲ ಎಂಬುದನ್ನು ಆತ್ಮೀಯರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಕುವೆಂಪು, ಬೇಂದ್ರೆ, ಕೆ.ಎಸ್. ನರಸಿಂಹ ಸ್ವಾಮಿಯವರಂಥ ಮಹಾನ್ ಕವಿಗಳಿಂದ ಹಿಡಿದು ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಲಕ್ಷ್ಮಣರಾವ್ ಮೊದಲಾದ ನಂತರದ ತಲೆಮಾರುಗಳ ಕವಿಗಳ ಗೀತೆಗಳಿಗೆ ರಾಗ ಸಂಯೋಜಿಸಿ ಅವರು ಹಾಡಿರುವ ರೀತಿ ಇಂದಿಗೂ ನಿತ್ಯ ನೂತನವಾಗೇ ಉಳಿದು ಬಂದಿದೆ. ಬದಲಾದ ಕಾಲಘಟ್ಟದಲ್ಲೂ ಅಶ್ವಥ್ ಅವರ ಹಾಡುಗಳು ಹಸಿರಾಗಿ ಉಳಿದಿರುವುದರ ಹಿಂದೆ ಮಾಧುರ್‍ಯವೇ ಕಾರಣ.

ashwath2peg

 

ಒಬ್ಬ ವ್ಯಕ್ತಿಯಾಗಿ ಅಶ್ವಥ್ ರದ್ದು ಅತ್ಯಂತ ವಿಭಿನ್ನ ವ್ಯಕ್ತಿತ್ವ. ವಿಪರೀತ ಸ್ವಾಭಿಮಾನಿ . ಆ ವಿಚಾರದಲ್ಲಿ ರಾಜಿ ಎಂಬುದು ಅವರ ನಿಘಂಟಿನಲ್ಲೇ ಇರಲಿಲ್ಲ. ಇದನ್ನು ಅವರ ಆತ್ಮೀಯರಲ್ಲಿ ಒಬ್ಬರಾದ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೀಗೆ ವಿವರಿಸುತ್ತಾರೆ. “ ಅದು ದರ್ಶನ್ ಅಭಿನಯದ ಕರಿಯ ಚಲನ ಚಿತ್ರದ ಹಾಡಿನ ರೆಕಾರ್ಡಿಂಗ್ ಸಂದರ್ಭ. ಕೆಂಚಾಲೋ ಮಂಚಾಲೋ ಹಾಡನ್ನು ಅಶ್ವಥ್ ಹಾಡಬೇಕಿತ್ತು. ಹಾಡಿನ ಟ್ರ್ಯಾಕ್ ಕೇಳಿಸಲಾಯಿತು. ಸಾಹಿತ್ಯ ಕೇಳಿ ಅಶ್ವಥ್ ಉರಿದು ಬಿದ್ದರು. ‘ಥೂತ್ ಎಂಥದ್ರೀ ಇದು, ನಾನು ಈ ಹಾಡು ಹಾಡೋದಿಲ್ಲ’ ಎಂದು ಸ್ಟುಡಿಯೋದಿಂದ ಹೊರ ಬಂದು ದಡದಡನೆ ಮೆಟ್ಟಿಲು ಇಳಿಯತೊಡಗಿದರು. ಅಷ್ಟರೊಳಗೆ ಈ ಸುದ್ದಿ ನಿರ್ಮಾಪಕರಿಗೂ ಗೊತ್ತಾಗಿತ್ತು .ಅವರು ಸ್ಟುಡಿಯೋ ಮೆಟ್ಟಿಲು ಹತ್ತಿ ಬರುತ್ತಾ ‘ಇವ್ರೆಲ್ಲ ಎಲ್ಲಿ ಹಾಡ್ತಾರ್ರೀ ದುಡ್ಡು ಕೊಟ್ಟರೆ ಇವ್ರಿಗಿಂತ ಚೆನ್ನಾಗಿ ಹಾಡೋರು ಯಾರು ಬೇಕಾದ್ರೂ ಸಿಕ್ತಾರೆ ‘ ಎಂದಿದ್ದು ಅಶ್ವಥ್ ಕಿವಿಗೆ ಬಿತ್ತು.

ashwath3

ಮೆಟ್ಟಿಲು ಇಳಿಯುತ್ತಿದ್ದವರು ಗಕ್ಕನೆ ನಿಂತು ಹಿಂದಕ್ಕೆ ನನ್ನತ್ತ ತಿರುಗಿ, ಆ ಪ್ರಡ್ಯೂಸರ್ ಏನ್ರೀ ದುಡ್ಡು ಬಿಸಾಕಿದ್ರೆ ಎಂಥವರೂ ಬಂದು ಈ ಹಾಡು ಹೇಳ್ತಾರೆ ಅಂದಿದ್ದು ಕೇಳಿಸ್ತೆನ್ರೀ ನಡಿರ್ರೀ ನೋಡೇ ಬಿಡೋಣ’ ಎಂದವರೆ, ವಾಪಸ್ ಸೀದಾ ರೆಕಾರ್ಡಿಂಗ್ ರೂಂ ಗೆ ಹೋಗಿ , ಒಂದೇ ಟೇಕಲ್ಲಿ ಹಾಡು ಮುಗಿಸಿದರು. ಹೊರ ಬಂದಾಗ ಅಲ್ಲೇ ಇದ್ದ ನಿರ್ಮಾಪಕರಿಗೆ “ನಿನ್ನ ಸಿನಿಮಾ ಹಿಟ್ ಆಗುತ್ತೋ ಇಲ್ವೋ ಗೊತ್ತಿಲ್ಲ, ಆದರೆ ನಾನು ಹಾಡಿದ ಹಾಡು ಮಾತ್ರ ಸೂಪರ್ ಹಿಟ್ ಆಗುತ್ತೆ ಬರಿದಿಟ್ಕೊ ,‘ಎಂದವರೆ ಸಂಭಾವನೆಯ ಚೆಕ್ಕನ್ನೂ ಸ್ವೀಕರಿಸದೇ ಅಲ್ಲಿಂದ ನಡೆದರು.
ಆ ಹಾಡು ಇಂದಿಗೂ ಜನಪ್ರಿಯವಾಗಿದೆ. ಶಿಶುನಾಳ ಷರೀಫರ ಪದಗಳಿಗೆ ಧ್ವನಿಯಾಗಿದ್ದ ಅಶ್ವಥ್ ಇಂಥ ಸಾಹಿತ್ಯ ಹಾಡಬೇಕಿತ್ತೆ ? ಎಂದು ಅನೇಕರು ಟೀಕಿಸಿದರು. ಆದರೆ ಆ ಹಾಡಿನ ಹಿಂದಿನ ಸತ್ಯ ಮತ್ತು ಹಿನ್ನಲೆ ಇದು” ಎಂದು ಕಿಕ್ಕೇರಿ ವಿವರಿಸಿದರು.

Leave a Comment