ಡಾ.ಬಿ.ಆರ್.ಅಂಬೇಡ್ಕರ್ ನಿಗಮ : ಹಸು ವಿಮೆ 76 ಲಕ್ಷ ರೂ. ಗುಳುಂ

* ಕಾಳೆ ಅವಧಿಯ 2017-18, 2018-19 ನೇ ಸಾಲಿನಲ್ಲಿ ಭಾರೀ ಕರ್ಮಕಾಂಡ
* ಎಲ್ಲಿ ಹೋಯಿತು, ರಾಜ್ಯ ಮಟ್ಟದ ಅವ್ಯವಹಾರ ತನಿಖಾ ತಂಡ
ರಾಯಚೂರು.ಜ.14- ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಹಸುಗಳ ವಿಮೆಗೆ ಸಂಬಂಧಿಸಿ ಬಹುದೊಡ್ಡ ಹಗರಣವೊಂದು ಈಗ ಅಧಿಕೃತ ಮಾಹಿತಿಯೊಂದಿಗೆ ಬಹಿರಂಗಗೊಂಡಿದೆ.
ಹೈನುಗಾರಿಕೆ ಯೋಜನೆಯಡಿ 2017-18 ಮತ್ತು 2018-19ನೇ ಸಾಲಿನಲ್ಲಿ ಹಸು ಖರೀದಿ ನೇರ ಸಾಲ ಯೋಜನೆಯಲ್ಲಿ ಹಸುಗಳ ವಿಮೆ ಹಣವನ್ನು ದುರ್ಬಳಕೆ ಮಾಡಿಕೊಂ‌ಡಿರುವುದು ಬೆಳಕಿಗೆ ಬಂದಿದೆ. 2017-18ನೇ ಸಾಲಿನಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಾರ್ಷಿಕ ಕ್ರಿಯಾ ಯೋಜನೆಯಡಿ 2,155 ಭೌದ್ಧಿಕ ಸಾಧನೆಗಳೊಂದಿಗೆ ಇಲ್ಲಿವರೆಗೂ 2,555 ಹಸುಗಳ ಖರೀದಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಹಣವೂ ಪಾವತಿಸಲಾಗಿದೆ. ಪ್ರತಿ ಹಸುವಿನ ಸಾಗಾಣಿಕೆಗೆ 2 ಸಾವಿರ ಮತ್ತು ವಿಮೆಗೆ 3 ಸಾವಿರ ಅನುದಾನ ನೀಡಲಾಗುತ್ತದೆ. ಆದರೆ, ಅಂಬೇಡ್ಕರ್ ನಿಗಮವೂ ವಿಮೆಗಾಗಿ ನೀಡಿದ 76.65 ಲಕ್ಷ ಹಣ ಯಾವುದೇ ವಿಮಾ ಕಂಪನಿಗೆ ಪಾವತಿಸಿಲ್ಲ. ಇಷ್ಟೊಂದು ಮೊತ್ತದ ಹಣ ಇಲಾಖೆಯ ಖಜಾನೆಯಲ್ಲಿಯೂ ಇಲ್ಲದಿರುವುದು ಈ ಹಣ ದುರ್ಬಳಕೆಯಾಗಿದೆ ಎನ್ನುವುದು ಸ್ಪಷ್ಟಗೊಳ್ಳುತ್ತದೆ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಭಾರಿ ವ್ಯವಸ್ಥಾಪಕರಾಗಿದ್ದ ವೈ.ಎ.ಕಾಳೆ ಅವರ ಅವಧಿಯಲ್ಲಿ ಈ ಅವ್ಯವಹಾರ ನಡೆದಿದೆ. ಎಮ್ಮೆ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನುವ ಗುಮಾನಿಗಳಿಗೆ ವಿಮಾ ಹಣ ದುರ್ಬಳಕೆ ಪೂರಕ ಸಾಕ್ಷಿಯಾಗಿದೆ. ವಿಮೆಗೆ ಸಂಬಂಧಿಸಿ ಸಾರ್ವಜನಿಕ ಮಾಹಿತಿ ಹಕ್ಕಿನಡಿ ಬಸವರಾಜ ನಕ್ಕುಂದಿ ಅವರು ಕೇಳಿದ ವರದಿಗೆ 30-11-2019 ರಂದು ಮಾಹಿತಿ ನೀಡಲಾಗಿದೆ.
2017-18 ಮತ್ತು 2018-19ನೇ ಸಾಲಿನಲ್ಲಿ ನೇರ ಸಾಲ ಯೋಜನೆಯಡಿ ಹಸು ಖರೀದಿ ವಿವರಕ್ಕೆ ಸಂಬಂಧಿಸಿ ನೀಡಿದ ಮಾಹಿತಿಯಲ್ಲಿ 2017-18 ರಿಂದ ಇಲ್ಲಿವರೆಗೆ ಒಟ್ಟು 2555 ಹಸುಗಳನ್ನು ಖರೀದಿಸಿರುವುದಾಗಿ ತಿಳಿಸಲಾಗಿದೆ. ಈ ಎಲ್ಲಾ ಹಸುಗಳಿಗೆ ಸಂಬಂಧಿಸಿ ವಿಮೆ ಯಾವ ಕಂಪನಿಗೆ ಮಾಡಲಾಗಿದೆ. ಕಂಪನಿಯ ಹೆಸರು ಮತ್ತು ಕಂಪನಿಗೆ ಪಾವತಿಸಿದ ಹಣದ ರಶೀದ್ ಮತ್ತು ಚೆಕ್ ನೀಡುವಂತೆ ಕೇಳಿದ ಮಾಹಿತಿಗೆ ವಿಮೆ ಮಾಡಿಸಿರುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಈ ಕುರಿತು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ಸುಬ್ರಮಣ್ಯಂ ಅವರನ್ನು ವಿಚಾರಿಸಿದಾಗ ಯಾವುದೇ ಹಸುವಿಗೆ ವಿಮೆ ಮಾಡಿಸಿದ ದಾಖಲೆಗಳಿಲ್ಲ. ವಿಮೆಗೆ ಸಂಬಂಧಿಸಿದ ಹಣವೂ ಇಲಾಖೆಯಲ್ಲವೆಂದು ಹೇಳಿದರು. ಎರಡು ವರ್ಷಗಳಲ್ಲಿ ವೈ.ಎ.ಕಾಳೆ ಅವರ ಅವಧಿಯಲ್ಲಿ 76 ಲಕ್ಷ ವಿಮೆ ಹಣ ಗುಳುಂ ಮಾಡಿದ್ದರೂ, ಈ ಬಗ್ಗೆ ಯಾವುದೇ ತನಿಖೆ ನಡೆಸದೇ, ಕಾಳೆ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಗಮನಿಸಿದರೇ, ಸಮಾಜ ಕಲ್ಯಾಣ ಇಲಾಖೆ ತಳಮಟ್ಟದಿಂದ ಮೇಲ್ಪಟ್ಟದ ಎಲ್ಲಾ ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ಪಾಲುದಾರರೇ ಎನ್ನುವ ಅನುಮಾನ ಮೂಡುವಂತೆ ಮಾಡಿದೆ.
ದಲಿತರಿಗೆ ಸೇರಿದ ಫಲಾನುಭವಿಗಳಿಗೆ ನೀಡಬೇಕಾದ ಅನುದಾನವನ್ನು ಕಾಳೆ ಮತ್ತು ಇನ್ನೂಳಿದ ಕೆಲವೇ ಬೆರಳೆಣಿಕೆಯ ಅಧಿಕಾರಿಗಳು ನುಂಗಿ, ನೀರು ಕುಡಿದಿದ್ದರೂ, ಈ ಬಗ್ಗೆ ಆ ಸಮುದಾಯದ ಪ್ರಮುಖಡರು ಧ್ವನಿಯೆತ್ತದಿರುವುದು ಅಚ್ಚರಿ ಉಂಟು ಮಾಡಿದೆ. ಈ ಎಲ್ಲಾ ಅವ್ಯವಹಾರಕ್ಕೆ ಸಂಬಂಧಿಸಿ ತನಿಖೆಗಾಗಿ ರಾಜ್ಯ ಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ತನಿಖಾ ತಂಡ ನಿಯುಕ್ತಿಗೊಳಿಸಲಾಗಿತ್ತು.
ಆದರೆ, ಕಳೆದ ಒಂದು ತಿಂಗಳಿಂದ ಈ ತನಿಖಾ ತಂಡ ಜಿಲ್ಲೆಯತ್ತ ಸುಳಿಯದಿರುವುದು ಸರ್ಕಾರದ ಹಣದ ಬಗ್ಗೆ ತಮ್ಮದೆ ಇಲಾಖೆಯ ಮೇಲಾಧಿಕಾರಿಗಳಿಗೆ ಆಸಕ್ತಿಯಿಲ್ಲದಿರುವುದು ಬಡ ದಲಿತರಿಗೆ ಮೇಲಾಧಿಕಾರಿಗಳು ವಂಚಿಸಿದಂತಾಗಿದೆ. ಕಾಳೆ ಅವರು ಇಡೀ ಇಲಾಖೆಯನ್ನೇ ತಮ್ಮ ಮುಷ್ಠಿಯಲ್ಲಿಡಿದುಕೊಳ್ಳುವ ಪ್ರಭಾವ ದಲಿತರ ಅಭಿವೃದ್ಧಿಗೆ ಬಳಸಬೇಕಾದ ಹಣ ಕೆಲವೇ ಅಧಿಕಾರಿಗಳ ಭ್ರಷ್ಟಾಚಾರಕ್ಕೀಡಾಗುವಂತಾಗಿದೆ.
76 ಲಕ್ಷ ವಿಮೆ ಹಣ ಭ್ರಷ್ಟಾಚಾರಕ್ಕೆ ಗುರಿಯಾಗಿದ್ದರೇ, ಹಸು ಖರೀದಿಯಲ್ಲಿ ಯಾವ ಪ್ರಮಾಣದ ಅವ್ಯವಹಾರ ನಡೆದಿರಬಹುದು ಎನ್ನುವುದನ್ನು ಊಹಿಸಬಹುದಾಗಿದೆ. ಒಂದು ಹಸು ಖರೀದಿಗೆ 35 ಸಾವಿರ ರೂ. ನೇರ ಸಾಲ ನೀಡಲಾಗುತ್ತದೆ. ಒಟ್ಟು 8.94 ಕೋಟಿ ರೂ. ಈ ಅವ್ಯವಹಾರದಲ್ಲಿ ಎಷ್ಟು ಫಲಾನುಭವಿಗಳಿಗೆ ಹಸು ನೀಡಲಾಗಿದೆ. ಇನ್ನೆಷ್ಟು ಹಣ ಅವ್ಯವಹಾರಕ್ಕೀಡಾಗಿದೆ ಎನ್ನುವುದು ಈಗ ತನಿಖೆಯಿಂದ ಮಾತ್ರ ಬಹಿರಂಗಗೊಳ್ಳಬೇಕಾಗಿದೆ.

Leave a Comment