ಡಾ.ಗಿರೀಶ್ ಕಾರ್ನಾಡ್ ನಿಧನ- ಶ್ರದ್ದಾಂಜಲಿ ಸಭೆ

ಕೆ.ಆರ್.ಪೇಟೆ. ಜೂ.11: ಜ್ಞಾಜಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ, ನಾಟಕಕಾರ, ಪ್ರಗತಿಪರ ಚಿಂತಕ, ಹೋರಾಟಗಾರ ಡಾ.ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣ ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಗೌರವ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಎ.ಸಿ.ಕಾಂತರಾಜು ಅವರು ಗಿರೀಶ್ ಕಾರ್ನಾಡ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಹಲವಾರು ಭಾಷೆಗಳಲ್ಲಿ ನಾಟಕಗಳನ್ನು ಹಾಗೂ ಸಾಹಿತ್ಯವನ್ನು ಬರೆದು ಸಮಾಜದ ಬದಲಾವಣೆಗೆ ಶ್ರಮಿಸಿದ ಗಿರೀಶ್ ಕಾರ್ನಾಡ್ ಅವರು ಸಮಾಜದಲ್ಲಿ ನಡೆಯುವ ಗೊಡ್ಡು ಸಂಪ್ರದಾಯಗಳಿಗೆ, ಮೂಡ ನಂಬಿಕೆಗಳಿಗೆ, ದೇವರು, ಧರ್ಮದ ಬಗ್ಗೆ ವಿರೋಧ ಮಾಡುತ್ತಾ ವೈಜ್ಞಾನಿಕವಾಗಿ ಚಿಂತನೆ ನಡೆಸುತ್ತಿದ್ದ ವಿಶಿಷ್ಟ ವ್ಯಕ್ತಿತ್ವ ಉಳ್ಳವರಾಗಿದ್ದರು. ನೇರ ನಿಷ್ಠುರವಾದಿಯಾಗಿದ್ದ ಕಾರ್ನಾಡ್ ಅವರ ಚಿಂತನೆಗಳು ಸಂಪ್ರದಾಯವಾದಿಗಳ ಹಾಗೂ ಮನುವಾದಿಗಳ ಕಣ್ಣನ್ನು ಕೆಂಪಾಗಿಸಿದ್ದವು. ಹಲವು ಸಂದರ್ಭದಲ್ಲಿ ಸಂಪ್ರದಾಯವಾದಿಗಳ ವಿರೋಧವನ್ನು ಎದುರಿಸಿದ್ದ ಗಿರೀಶ್ ಕಾರ್ನಾಡ್ ಅವರು ಎಡಪಂಥೀಯ ಧೋರಣೆ ಹೊಂದಿದ್ದ ಪ್ರಗತಿಪರ ಚಿಂತಕರಾಗಿದ್ದರು. ಇವರು ಬರೆದು ನಾಟಕಗಳು, ಸಾಗಿತ್ಯಗಳು ಇಂಗ್ಲೀಷ್, ಹಿಂದಿ ಸೇರಿದಂತೆ ವಿಶ್ವದ ಅನೇಕ ಭಾಷೆಗಳಲ್ಲಿ ಭಾಷಾಂತರಗೊಂಡು ಕಾರ್ನಾಡ್ ಅವರಿಗೆ ಹೆಸರು ತಂದು ಕೊಟ್ಟಿದ್ದವು. ಇದರಿಂದಾಗಿ ಇವರಿಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದಿದ್ದವು. ಇಂತಹ ವಿಶೇಷ ಸಾಧನೆ ಮಾಡಿದ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೂ ಪ್ರಗತಿ ಪರ ಚಿಂತನಾ ಲೋಕಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಎ.ಸಿ.ಕಾಂತರಾಜು ಆಶಯ ವ್ಯಕ್ತಪಡಿಸಿದರು.
ಶ್ರದ್ದಾಂಜಲಿ ಸಭೆಯಲ್ಲಿ ತಾಲೂಕು ಕರವೇ ಶಿವರಾಮೇಗೌಡ ಬಣದ ಉಪಾಧ್ಯಕ್ಷ ಸಮೀರ್, ಗೌರವಾಧ್ಯಕ್ಷ ಅನುವಿನಕಟ್ಟೆ ಸೋಮು, ರಾಜು ಮತ್ತಿತರರು ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಕಾರ್ನಾಡ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

Leave a Comment