ಡಯಾಬಿಟಿಸ್‌ಗೆ ಮೆಂತೆ ಮದ್ದು

ಪ್ರತಿ ನಿಮಿಷಕ್ಕೆ ಲಕ್ಷಾಂತರ ಜನರು ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದು, ಇದು ಸಾಂಕ್ರಾಮಿಕ ರೋಗವಾಗಿ ಪರಿಣಮಿಸುತ್ತಿದೆ. ವಿಶೇಷವಾಗಿ ಭಾರತದಲ್ಲಿ. ಇದನ್ನು ಡಬ್ಲ್ಯುಎಚ್‌ಒ ಸಹ ತನ್ನ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದಾಗಿ ಈ ಕಾಯಿಲೆಯಿಂದ ಬಳಲುವವರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ಇತ್ತ ಕಡೆ ಔಷಧಿಗಳ ಬಳಕೆ ನಮ್ಮ ದೇಹವನ್ನು ನಿರಂತರವಾಗಿ ನಜ್ಜುಗುಜ್ಜು ಮಾಡುತ್ತಲೇ ಇದೆ. ಆದರೆ ನಿಜಕ್ಕೂ ಮೆಂತೆ ಕಾಳಿನಂತಹ ಮನೆಮದ್ದು ಡಯಾಬಿಟಿಸ್ ರೋಗಿಗಳಿಗೆ ರಾಮಬಾಣವಾಗಿದೆ.
ವಿಶ್ವದ ವಿವಿಧ ವಿಶ್ವವಿದ್ಯಾಲಯಗಳ ಹಲವಾರು ತಜ್ಞರು ಡಯಾಬಿಟಿಸ್ ಗೆ ನೈಸರ್ಗಿಕ ಪರಿಹಾರವೆಂದರೆ ಮೆಂತೆ ಕಾಳು ಎಂಬ ಮಾಹಿತಿ ನೀಡಿದ್ದಾರೆ. ಟೈಪ್ ೧ ಮತ್ತು ಟೈಪ್ ೨ ಡಯಾಬಿಟಿಸ್ ಗೆ ಮೆಂತ್ಯವನ್ನು ಹೇಗೆ ಸೇವಿಸಬೇಕು ಎಂಬುದನ್ನೂ ಅಧ್ಯಯನಗಳು ಸ್ಪಷ್ಟವಾಗಿ ತಿಳಿಸಿವೆ. ಭಾರತದಲ್ಲಿ ನಡೆಸಿದ ಅಧ್ಯಯನ ದಲ್ಲಿ ಇನ್ಸುಲಿನ್ ಅವಲಂಬಿತ ಡಯಾಬಿಟಿಸ್ ರೋಗಿಗಳು ಆಹಾರದಲ್ಲಿ ನಿಯಮಿತವಾಗಿ ೧೦೦ ಗ್ರಾಂ ಡಿಫ್ಯಾಟೆಡ್ ಮೆಂತೆ ಕಾಳಿನ ಪುಡಿಯನ್ನು ಸೇವಿಸಿದ್ದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಪರಿಣಾಮಕಾರಿ ಯಾಗಿ ಕಡಿಮೆಯಾಗಿದೆ.ಮತ್ತೊಂದು ಸಂಶೋಧನಾ ಅಧ್ಯಯನವು ಟೈಪ್ ೨ ಡಯಾಬಿಟಿಸ್ ರೋಗಿಗಳ ಊಟದಲ್ಲಿ ೧೫ ಗ್ರಾಂ ಮೆಂತೆ ಪುಡಿಯನ್ನು ಸೇರಿಸಿ, ಊಟದ ನಂತರ ಪರೀಕ್ಷಿಸಿದಾಗ ಗ್ಲೂಕೋಸ್ ಮಟ್ಟದ ಹೆಚ್ಚಳ ಪರಿಣಾಮಕಾರಿಯಾಗಿ ಕಡಿಮೆಯಾಗಿದೆ.

ಪಾತ್ರೆಗೆ ಒಂದು ಕಪ್ ನೀರು ಹಾಕಿ, ಕುದಿಯಲು ಆರಂಭಿಸಿದ ನಂತರ ೧ ಚಮಚ ಒಣಗಿದ ಮೆಂತೆ ಎಲೆಗಳು, ೧ ಟೀಸ್ಪೂನ್ ಮೆಂತೆ ಕಾಳುಗಳನ್ನು ಸೇರಿಸಿ. ಸ್ವಲ್ಪ ಸಮಯದವರೆಗೆ ಕುದಿಸಿ. ನಂತರ ಸೋಸಿ, ನಿಮಗೆ ಕಹಿ ಎನಿಸಿದರೆ ರುಚಿಗೆ ಜೇನುತುಪ್ಪ ಸೇರಿಸಿ. ರಕ್ತದಲ್ಲಿ ಗ್ಲೂಕೋಸ್ ಮಟ್ಟ ಕಡಿಮೆಯಾಗಬೇಕೆಂದರೆ ಈ ಬಿಸಿ ಚಹಾವನ್ನು ದಿನಕ್ಕೆ ಎರಡು ಬಾರಿ ಬೆಳಗ್ಗೆ ಮತ್ತು ಸಂಜೆ ಸೇವಿಸಿ.

ಒಂದು ಚಮಚ ಮೆಂತೆ ಕಾಳುಗಳು ಮತ್ತು ಒಂದು ಕಪ್ ಮೊಸರು ತೆಗೆದಿಟ್ಟುಕೊಳ್ಳಿ. ಇನ್ನು ಮೆಂತೆ ಕಾಳನ್ನು ಪುಡಿ ಮಾಡಿ ಮೊಸರಿಗೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿಯಾದರೂ ಸೇವಿಸಿ.
ಎರಡು ಟೇಬಲ್ ಸ್ಪೂನ್ ಮೆಂತೆ ಬೀಜಗಳನ್ನು ಎರಡು ಕಪ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿ. ಮರುದಿನ ಬೆಳಗ್ಗೆ ನೀರನ್ನು ಸೋಸಿ ಸೇವಿಸಿ. ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾಗಲು ಪ್ರತಿದಿನ ಸುಮಾರು ಒಂದು ತಿಂಗಳ ಕಾಲ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ.
ಒಂದು ಚಮಚ ಮೆಂತೆ ಪುಡಿ, ಒಂದು ಚಮಚ ಬೇವಿನ ಪುಡಿ, ಒಂದು ಚಮಚ ಹಾಗಲಕಾಯಿ ಪುಡಿ ತೆಗೆದಿಟ್ಟುಕೊಳ್ಳಿ. ದೊಡ್ಡ ಬಟ್ಟಲಿನಲ್ಲಿ ಈ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಗಾಜಿನ ಜಾರ್ ನಲ್ಲಿ ಸಂಗ್ರಹಿಸಿ. ಈ ಜಾರ್ ಅನ್ನು ತಂಪಾದ ಶುಷ್ಕ ಸ್ಥಳದಲ್ಲಿ ಇರಿಸಿ. ಒಂದು ಟೀ ಚಮಚ ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ಊಟ ಮತ್ತು ಡಿನ್ನರ್‌ಗೆ ಮುಂಚಿತವಾಗಿ ಸೇವಿಸಿ.
ರೋಗದ ತೀವ್ರತೆ ಮತ್ತು ರೋಗಿಯ ವಯಸ್ಸು, ದೈಹಿಕ ಸ್ಥಿತಿಯನ್ನು ನೋಡಿ ಮೆಂತ್ಯಕಾಳನ್ನು ಸೇವಿಸಬೇಕು. ರೋಗಿಗಳು ೧೨.೫ ಗ್ರಾಂ ಮೆಂತ್ಯಕಾಳಿನ ಪುಡಿಯನ್ನು ತೆಗೆದುಕೊಳ್ಳುವುದು ಒಳಿತು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಬಹಳಷ್ಟು ರೋಗಿಗಳು ಕೇವಲ ೨.೫ ಗ್ರಾಂ ಮೆಂತೆ ಕಾಳಿನ ಪುಡಿ ಸೇವಿಸಿದ ನಂತರ ತಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಸುಧಾರಣೆಯಾಗಿದೆ.
ಮೆಂತ್ಯವು ಕ್ಯಾಪ್ಸುಲ್ ರೂಪದಲ್ಲಿ ಸಹ ಲಭ್ಯವಿದೆ. ೫೦೦ ಮಿಗ್ರಾಂ ಕ್ಯಾಪ್ಸುಲ್ ಅನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ತೆಗೆದುಕೊಂಡ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಸುಧಾರಣೆಯನ್ನು ಕಂಡುಕೊಂಡಿದ್ದಾರೆ ಎಂದು ಅಧ್ಯಯನಗಳು ಹೇಳಿವೆ. ಆದರೆ ಈ ಕ್ಯಾಪ್ಸುಲ್‌ಗಳನ್ನು ಖರೀದಿಸುವ ಮೊದಲು ವಿಶ್ವಾಸಾರ್ಹ ಬ್ರಾಂಡ್ ಗಳ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಮೆಂತೆ ಕಾಳನ್ನು ಹೆಚ್ಚು ತೆಗೆದುಕೊಂಡಾಗ ಕೆಲವು ವ್ಯಕ್ತಿಗಳಲ್ಲಿ ಅನಿಲ ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು. ಮೆಂತೆ ಕಾಳುಗಳು ಮತ್ತು ಎಲೆಗಳು ಕಹಿಯಾಗಿದ್ದರೂ ಡಯಾಬಿಟಿಸ್ ಗೆ ಸೂಕ್ತ ಪರಿಹಾರವಾಗಿದೆ. ಆದರೆ ನಿಮ್ಮ ದೇಹಕ್ಕೆ ಒಗ್ಗುತ್ತದೆಯೇ, ಇಲ್ಲವೇ ಎಂಬುದನ್ನು ತಿಳಿಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಗರ್ಭಿಣಿ ಮಹಿಳೆಯರು ಸೇವಿಸಬಾರದು.

Leave a Comment