ಡಯಟ್ ಪ್ರಾಚಾರ್ಯರಿಗೆ ಶಾಲಾ ಭೇಟಿ ಕಡ್ಡಾಯ

ಧಾರವಾಡ, ಆ.14: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಚಾರ್ಯರಿಗೆ ಶಾಲಾ ಭೇಟಿ ಕಡ್ಡಾಯವಾಗಿದ್ದು, ತಿಂಗಳಲ್ಲಿ ಕನಿಷ್ಠ 10 ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರ ಬೋಧನೆಯ ಪ್ರಗತಿ ಪರಿಶೀಲನೆ ನಡೆಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೂಚಿಸಿದರು.
ಅವರು ಇಲ್ಲಿಯ ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಹಾಗೂ ನಿರ್ವಹಣಾ ಸಂಸ್ಥೆ (ಸಿಸ್ಲೆಪ್) ಬೆಂಗಳೂರಿನ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಡಯಟ್ ಪ್ರಾಚಾರ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಜಿಲ್ಲೆಯೊಳಗಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಕ್ರಿಯಾಶೀಲವಾಗಿ ಸೃಜನಶೀಲ ಬೋಧನಾ ಚಟುವಟಿಕೆಗಳಿಂದ ಕೂಡಿರುವಂತೆ ಮತ್ತು ವಿದ್ಯಾರ್ಥಿಗಳಲ್ಲಿ ವ್ಯಾಪಕ ಕಲಿವಿನಫಲ ಸಂವರ್ಧನೆಗೆ ಶಿಕ್ಷಕರು ಪರಿಶ್ರಮಿಸುವಂತೆ ಡಯಟ್ ಪ್ರಾಚಾರ್ಯರು ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದರು.
ಗ್ರಂಥಾಲಯ ತೆರೆದುಕೊಳ್ಳಲಿ : ಶಾಲಾ ಮಕ್ಕಳಲ್ಲಿ ವಿಷಯಾಧಾರಿತ ಜಿಜ್ಞಾಸೆ, ಕುತೂಹಲ ಹಾಗೂ ಆಸಕ್ತಿ ಮೂಡಿಸುವ ಕ್ರಿಯಾಪ್ರೇರಕ ಬೋಧನೆ ಆಗಬೇಕಾಗಿದೆ. ವಿದ್ಯಾರ್ಥಿಗಳ ಅರಿವಿಗೆ ತಲುಪಬೇಕಾದ ಸಂಗತಿಗಳು ಪಠ್ಯದಾಚೆಗೂ ಇವೆ. ಈ ನಿಟ್ಟಿನಲ್ಲಿ ಶಾಲಾ ಗ್ರಂಥಾಲಯಗಳು ತೆರೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ನಿತ್ಯವೂ ಹೊಸ ಓದನ್ನು ರೂಢಿಸಿಕೊಳ್ಳಬೇಕು ಎಂದರು.
ತಮ್ಮ ಜಿಲ್ಲೆ ಮತ್ತು ತಾಲೂಕು ವ್ಯಾಪ್ತಿಯ ಪ್ರಾದೇಶಿಕ ಪಾರಂಪರಿಕ ಘನತೆ, ಸಾಹಿತ್ಯ ಪರಂಪರೆ, ಇತಿಹಾಸ, ಸಂಸ್ಕೃತಿ, ಕಲೆ ಮುಂತಾದವುಗಳ ನಿಖರ ಮಾಹಿತಿ ವಿದ್ಯಾರ್ಥಿಗಳಿಗೆ ಇರಬೇಕಾಗುತ್ತದೆ. ಕತೆ, ಕಾದಂಬರಿ, ಕಾವ್ಯ, ವ್ಯಾಕರಣದ ಅಂಶಗಳು ವಿದ್ಯಾರ್ಥಿ ವ್ಯಾಸಂಗದ ಅವಗಾಹನೆಗೆ ಬಾರದೇ ಹೋದರೆ ಭವಿಷ್ಯದ ಬದುಕಿಗೆ ಭರವಸೆಯೇ ಉಳಿಯುವದಿಲ್ಲ. ಮಾಹಿತಿ-ತಂತ್ರಜ್ಞಾನದ ಇಂದಿನ ಕಾಲಘಟ್ಟದಲ್ಲಿ  ಸಾಮಾನ್ಯಜ್ಞಾನದ ಸಂಗತಿಗಳನ್ನು ಅರಿಯಲು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಲಭಿಸಬೇಕು. ಡಯಟ್ ನೇತೃತ್ವದಲ್ಲಿ ಹೊಸ ಅನ್ವೇಷಣೆಯ ಶೈಕ್ಷಣಿಕ ಸಾಹಿತ್ಯ ರಚನೆಗೆ ವಿಧಾಯಕ ಚಿಂತನೆ ನಡೆಯಬೇಕು ಎಂದೂ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸಲಹೆ ಮಾಡಿದರು.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ಮಾತನಾಡಿ, ಶಿಕ್ಷಣ ಸಚಿವರು ಸೂಚಿಸಿರುವ ಪುಸ್ತಕ ನೋಡಿ ಬರೆಯುವ ಮುಕ್ತ ಪರೀಕ್ಷಾ ವಿಧಾನ ಕುರಿತು ಪ್ರತೀ ಜಿಲ್ಲಾ ಹಂತದಲ್ಲಿ ಸಂವಾದ ಕಾರ್ಯಕ್ರಮವನ್ನು ಜರುಗಿಸಿ ಸ್ಥಳೀಯ ವಿವಿಧ ಸಂಪನ್ಮೂಲ ವ್ಯಕ್ತಿಗಳ, ಶಿಕ್ಷಣ ತಜ್ಞ್ಞರ, ಎಸ್.ಡಿ.ಎಂ.ಸಿ. ಪದಾಧಿಕಾರಿಗಳ ಅಭಿಪ್ರಾಯಗಳನ್ನು ಒಳಗೊಂಡ ವರದಿಯನ್ನು ಸಿದ್ಧಪಡಿಸಬೇಕು. ಶಿಕ್ಷಕರ ಶಿಕ್ಷಣ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಡಯಟ್ ಪ್ರಾಚಾರ್ಯರು ಗಮನಹರಿಸಬೇಕು. ನವ್ಹೆಂಬರ್ ಒಳಗಾಗಿ ಡಯಟ್ ಮೂಲಕ ನಡೆಸಲಾಗುವ ಎಲ್ಲ ತರಬೇತಿಗಳನ್ನು ಪೂರ್ಣಗೊಳಿಸಬೇಕು. ಶಾಲೆನಡೆದ ದಿನಗಳನ್ನು ಅಧಿಕಗೊಳಿಸಬೇಕೆಂಬ ಸಂಕಲ್ಪದಿಂದ ನವ್ಹೆಂಬರ್ ನಂತರ ಯಾವುದೇ ತರಬೇತಿಗಳನ್ನು ನಡೆಸುವಂತಿಲ್ಲ ಎಂದರು.
‘ಸಿಸ್ಲೆಪ್’ ನಿರ್ದೇಶಕ ಬಿ.ಎಸ್. ರಘುವೀರ ಮಾತನಾಡಿ, ಡಯಟ್‍ಗಳು ಜಿಲ್ಲೆಯ ಶೈಕ್ಷಣಿಕ ನಾಯಕತ್ವದ ಉತ್ಕೃಷ್ಟ ಸಂಸ್ಥೆಯಾಗಿದ್ದು, ಪ್ರಾಚಾರ್ಯರು ವಿಷಯ ತಜ್ಞರಾಗಿ ಕೆಲಸಮಾಡಬೇಕು. ದತ್ತಾಂಶಗಳ ನಿರ್ವಹಣೆಯ ಮೂಲಕ ಪರಿಣಾಮಕಾರಿ ಶೈಕ್ಷಣಿಕ ನಿರ್ಧಾರ ಕೈಗೊಳ್ಳುವಲ್ಲಿ ಆಸಕ್ತಿವಹಿಸಬೇಕು. ಸಾಮಥ್ರ್ಯಾಭಿವೃದ್ಧಿ ಕಾರ್ಯಕ್ರಮಗಳು, ಸಮಗ್ರ ಶಿಕ್ಷಣ, ಸಮನ್ವಯ ಶಿಕ್ಷಣ, ಶೈಕ್ಷಣಿಕ ನಾಯಕತ್ವ ಮುಂತಾದ ವಿಷಯಗಳ ಮೇಲೆ ರಾಜ್ಯದ ನಿರ್ದೇಶಕರು, ಸಹ ನಿರ್ದೇಶಕರು, ಉಪನಿರ್ದೇಶಕರು, ಬಿಇಓ ಹಾಗೂ ಇತರೇ ಅಧಿಕಾರಿಗಳಿಗೆ ಕ್ರಮವಾಗಿ 1, 2 ಹಾಗೂ 3 ದಿನಗಳ ಸಾಮಥ್ರ್ಯಾಭಿವೃದ್ಧಿ ತರಬೇತಿ ನೀಡಲು ಸಿಸ್ಲೆಪ್ ಯೋಜಿಸಿದೆ. ಡಯಟ್ ಪ್ರಾಚಾರ್ಯರು ತಮ್ಮ ಜಿಲ್ಲೆಯ ಒಂದು ಉತ್ತಮ ಶಾಲೆಯನ್ನು ಗುರುತಿಸಿ ಆ ಶಾಲೆಯ ಪರಿಣಾಮಕಾರಿ ಸಾಧನಾ ಪ್ರಕ್ರಿಯೆಗಳ ದಾಖಲೀಕರಣ ಮಾಡಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆ: ನಮ್ಮ ಶಾಲಾ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಸಜ್ಜುಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಪ್ರತಿಭಾನ್ವೇಷಣ ಪರೀಕ್ಷೆ (ಎನ್.ಟಿ.ಎಸ್.ಇ.) ಹಾಗೂ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ ಶಿಪ್ ಸ್ಕೀಂ (ಎನ್.ಎಂ.ಎಂ.ಎಸ್.) ಪರೀಕ್ಷೆಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಈ ಪರೀಕ್ಷೆಗಳಿಗಾಗಿ ಪ್ರಶ್ನೆಗಳ ಬ್ಯಾಂಕ್ ಪುಸ್ತಿಕೆಯನ್ನು ಡಿಎಸ್‍ಇಆರ್‍ಟಿ ಹೊರತರಲಿದೆ. ವಿಜ್ಞಾನ ಕೇಂದ್ರಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಬೇಕು. ಏಜ್ಯೂಸ್ಯಾಟ್ ಸಂಪರ್ಕದಲ್ಲಿ 500 ಕಲಿಕಾ ವೀಡಿಯೋಗಳನ್ನು ಅಪ್ ಲೋಡ್ ಮಾಡಲಾಗಿದ್ದು, ಇವುಗಳನ್ನು ಯು-ಟ್ಯೂಬ್‍ದಲ್ಲಿಯೂ ಪಡೆಯಬಹುದಾಗಿದೆ ಎಂದು ಡಿಎಸ್‍ಇಆರ್‍ಟಿ ನಿರ್ದೇಶಕ ಗೋಪಾಲಕೃಷ್ಣ ಹೇಳಿದರು. ಸಿಸ್ಲೆಪ್ ಹಿರಿಯ ಸಹಾಯಕ ನಿರ್ದೇಶಕಿ ಮಂಗಳಾ ನಾಯಕ, ಸಹಾಯಕ ನಿರ್ದೇಶಕ ಸಿ.ಆರ್. ಅಶ್ವಿನ್, ಉಪನ್ಯಾಸಕರುಗಳಾದ ಲಕ್ಷ್ಮಿ ಭಗವತಿ, ಎಚ್.ವ್ಹಿ. ಸ್ವರೂಪಶೀಲ, ಪ್ರಕಾಶ ಅಂಗಡಿ ಇದ್ದರು. ರಾಜ್ಯದ 34 ಜಿಲ್ಲೆಗಳ ಡಯಟ್ ಪ್ರಾಚಾರ್ಯರು ಹಾಗೂ ಇತರೇ ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Comment