ಟ್ರೇಡ್ ಲೈಸೆನ್ಸ್ ರದ್ಧತಿಗೆ ಮನವಿ

ಬೆಂಗಳೂರು, ಫೆ. ೧೭- ರಾಜ್ಯದ ಉದ್ದಿಮೆ, ವ್ಯವಹಾರ ಹಾಗೂ ಸೇವಾ ನಿರತ ಮೊದಲಾದ ಎಲ್ಲ ಬಗೆಯ ವ್ಯವಹಾರಗಳಿಗೆ “ಟ್ರೇಡ್ ಲೈಸೆನ್ಸ್” ರದ್ದು ಮಾಡಬೇಕು ಎಂಬುದು ಸೇರಿದಂತೆ ವಿವಿಧ ಪ್ರಮುಖ ಬೇಡಿಕೆಗಳನ್ನು ಬಜೆಟ್‌ನಲ್ಲಿ ಈಡೇರಿಸುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಇಂದಿಲ್ಲಿ ಒತ್ತಾಯಿಸಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಿದ್ದ 2017-18 ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಎಫ್‌ಕೆಸಿಸಿಐನ ಹಿರಿಯ ಉಪಾಧ್ಯಕ್ಷ ಕೆ. ರವಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಅವರಿಗೆ ಈ ಕುರಿತು ಮನವಿ ಸಲ್ಲಿಸಿದೆ.
ಸಣ್ಣ, ಅತಿಸಣ್ಣ ಮತ್ತು ಮಧ್ಯಮವರ್ಗದ ಕೈಗಾರಿಕೆಗಳಿಗೆ ಕೈಗಾರಿಕಾ ನಿವೇಶನವನ್ನು 2 ಎಕರೆ ವರೆಗೆ ಲೀಸ್ ಕಂ. ಸೇಲ್ ಮಾರಾಟದ ಆಧಾರದ ಮೇಲೆ ನೀಡಬೇಕು. ಆಸ್ತಿಗಳ ಗೈಡೆನ್ಸ್ ಮೌಲ್ಯವನ್ನು ಶೇ. 10 ರಿಂದ ಶೇ. 30 ಕ್ಕೆ ಹೆಚ್ಚಿಸುವುದನ್ನು ಕೈಬಿಡಬೇಕು. ಡಿಜಿಟಲ್ ವ್ಯವಹಾರದ ಉತ್ತೇಜನಕ್ಕಾಗಿ ಇ-ವ್ಯಾಲೆಟ್‌ನ ಪ್ರಚಾರವನ್ನು ವ್ಯಾಪಕವಾಗಿ ಕೈಗೊಳ್ಳಬೇಕು ಎಂದೂ ಮನವಿ ಮಾಡಲಾಗಿದೆ.
ಬೆಂಗಳೂರು ಮಹಾನಗರವನ್ನು ಮೆಗಾ ಸಿಟಿಯಾಗಿ ಅಭಿವೃದ್ಧಿಪಡಿಸುವುದು ಹಾಗೂ ಬ್ರಾಂಡ್ ಬೆಂಗಳೂರು ಎಂದು ಜಾಗತೀಕವಾಗಿ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಬೆಂಗಳೂರು ಮಹಾನಗರಕ್ಕೆ ಸತತವಾಗಿ ಹಾಗೂ ನಿಖರವಾಗಿ ವಿದ್ಯುತ್ ಪೂರೈಸಲು ಅನುಕೂಲವಾಗುವಂತೆ ಯಲಹಂಕ ಮತ್ತು ಬಿಡದಿಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಗ್ಯಾಸ್ ಆಧಾರಿತ ಇಂಧನ ಉತ್ಪಾದನಾ ಯೋಜನೆಯ ಒಪ್ಪಂದವನ್ನು ತ್ವರಿತಗತಿಯಲ್ಲಿ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ಇದೇ ಸಂದರ್ಭದಲ್ಲಿ ಇಡಲಾಗಿದೆ.
ಉದ್ಯೋಗದ ಸರಳೀಕರಣ ಕಾರ್ಯಕ್ರಮದ ಒಂದು ಹೆಜ್ಜೆಯಾಗಿ ಕೆಐಎಡಿಬಿ, ಕೆಎಸ್ಎಸ್ಐಡಿಸಿ ಮತ್ತು ಗ್ರಾಮ ಪಂಚಾಯ್ತಿ ಪ್ರದೇಶಗಳಲ್ಲಿ ಸ್ಥಾಪಿತವಾಗುವ ಉದ್ಯಮಗಳಿಗೆ ಸಾಮಾನ್ಯ ಲೈಸೆನ್ಸ್ ನೀಡುವುದರಿಂದ ವಿನಾಯ್ತಿ ನೀಡಬೇಕು. ರಾಜ್ಯದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಐಷರಾಮಿ ಹಾಗೂ ವ್ಯಾಟ್ ತೆರಿಗೆಗಳನ್ನು ಕನಿಷ್ಠ ಪಕ್ಷ ಶೇ. 5 ರಷ್ಟು ಕಡಿತಗೊಳಿಸಬೇಕು ಎಂದು ನಿಯೋಗ ಮನವಿ ಮಾಡಿದೆ.
250 ಕೆವಿಹೆಚ್‌ಗಿಂತ ಅಧಿಕ ಕ್ಯಾಪ್ಟೀವ್ ಇಂಧನವನ್ನು ವ್ಯಯಿಸುವ ಕೈಗಾರಿಕಾ ಘಟಕಗಳಿಗೆ ಪ್ರತಿ ಯೂನಿಟ್‌ಗೆ 10 ಪೈಸೆಯ ಇಂಧನ ತೆರಿಗೆಯನ್ನು ವಿನಾಯ್ತಿ ನೀಡುವುದರೊಂದಿಗೆ 50 ಕೆವಿಹೆಚ್‌ಗಿಂತ ಅಧಿಕ ಆಕ್ಸುಲರಿ ಇಂಧನವನ್ನು ವ್ಯಯಿಸುವ ಘಟಕಗಳಿಗೆ ಪ್ರತಿ ಯೂನಿಟ್‌ಗೆ 5 ಪೈಸೆಗಳ ವಿದ್ಯುತ್ ತೆರಿಗೆಯನ್ನು ವಿನಾಯ್ತಿ ನೀಡಬೇಕು ಎಂದು ಕೋರಲಾಗಿದೆ.
ಮುಂಗಡ ಪತ್ರದಲ್ಲಿ ಸಹಾಯ ಧನದ ಪ್ರಮಾಣವನ್ನು ತಗ್ಗಿಸಲು ಕೃಷಿ ಪಂಪ್‌ಸೆಟ್‌ಗಳ ಬಳಸಿದ ಇಂಧನದ ಸಮಗ್ರ ಲೆಕ್ಕವು ಅವಶ್ಯಕವಾಗಿದೆ. ಹತ್ತು ಅಶ್ವಶಕ್ತಿಗಿಂತ ಕಡಿಮೆ ಇಂಧನದ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಾಯ್ದೆ 108ರ ಅಡಿಯಲ್ಲಿ ಸ್ಪಷ್ಟ ನೀತಿ ನಿರ್ಧಾರವನ್ನು ಘೋಷಿಸಬೇಕು ಎಂದು ಮನವಿ ಮಾಡಲಾಗಿದೆ.
ಸ್ಟಾಂಪ್ ದರಹೆಚ್ಚಳವನ್ನು ರದ್ದುಗೊಳಿಸಬೇಕು. ಹಾಲಿ ಚಾಲ್ತಿಯಲ್ಲಿರುವ ನಿಯಮಾವಳಿಯಂತೆ 10 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಸಾಲಕ್ಕಾಗಿ ಆಸ್ತಿಯನ್ನು ಹಣಕಾಸು ಸಂಸ್ಥೆಗಳಲ್ಲಿ ಅಡ ಇಡಲು ಸಾಲದ ಮೊತ್ತದ ಶೇ. 2 ರಷ್ಟು ಕರವನ್ನು ಭರಿಸಬೇಕಾಗಿದ್ದು ಇದನ್ನು ರದ್ದು ಮಾಡಬೇಕು ಎಂದು ನಿಯೋಗ ಮನವಿ ಮಾಡಿದೆ.

Leave a Comment