ಟ್ರಕ್ ಕಂಡೆಕ್ಟರ್‌ಗೆ ಹಲ್ಲೆ

ಮಂಗಳೂರು, ಸೆ.೯- ಫೈನಾನ್ಸ್‌ವೊಂದರ ವಾಹನ ಜಪ್ತಿ ಮಾಡುವವರು ಟ್ರಕ್ ಕಂಡಕ್ಟರ್‌ಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಘಟನೆ ಶುಕ್ರವಾರ ಸಂಜೆ ನಡೆದಿದೆ. ಘಟನೆಯಲ್ಲಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಪಡುಬಿದ್ರೆ ಪಾಲಿಮಾರು ನಿವಾಸಿ, ಕಂಡಕ್ಟರ್ ಶೌಕತ್ (೨೩) ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಸೆ.೭ರಂದು ಕೇರಳಕ್ಕೆ ಮೀನು ಸಾಗಿಸಿ ಮಲ್ಪೆಗೆ ಹೊರಟಿದ್ದ ಟ್ರಕ್ ಕೋಲ್‌ನಾಡು ಸಮೀಪಿಸುತ್ತಿತ್ತು. ಈ ವೇಳೆ ಮಲ್ಪೆಯ ಮುರುಗಪ್ಪ ಗ್ರೂಪ್‌ನ ಚೋಳಮಂಡಲಂ ಫೈನಾನ್ಸ್‌ನ ನಾಲ್ವರು ವಾಹನ ಜಪ್ತಿ ಮಾಡುವವರು ಎರಡು ಕಾರುಗಳಲ್ಲಿ ಬಂದು ವಾಹನವನ್ನು ಅಡ್ಡಗಟ್ಟಿದ್ದಾರೆ. ಮೀನಿನ ಟ್ರಕ್‌ನ ಲೋನ್ ಕಂತು ಬಾಕಿಯಿದ್ದು, ವಾಹನ ಜಪ್ತಿ ಮಾಡಲಾಗುವುದು ಎಂದು ಹೇಳಿ ಟ್ರಕ್‌ನ್ನು ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಪಣಂಬೂರು ಬಳಿ ಡಿಸೇಲ್ ಖಾಲಿಯಾಗಿದೆ ಎಂದು ಹೇಳಿ ವಾಹನ ನಿಲ್ಲಿಸಿದ್ದಾರೆ. ಟ್ರಕ್‌ನಿಂದ ಕೆಳಗಿಳಿದು ಟ್ರಕ್‌ನ ಚಾಲಕ ಪಡುಬಿದ್ರೆಯ ರಾಜೇಶ್ (೨೨) ಬಳಿಯಿದ್ದ ೭೦ ಸಾವಿರ ರೂ. ನಗದು, ೧೨ ಗ್ರಾಂ ಚಿನ್ನ ಹಾಗೂ ಟ್ರಕ್‌ನಲ್ಲಿದ್ದ ೨೪೦ ಮೀನಿನ ಬಾಕ್ಸ್, ವಾಹನದ ಆರ್‌ಸಿ ಸೇರಿದಂತೆ ಟ್ರಕ್‌ನ್ನು ತಮ್ಮ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಡಿಸೇಲ್ ಟ್ಯಾಂಕ್‌ನ ಬೀಗದಿಂದ ಕಂಡಕ್ಟರ್ ಶೌಕತ್ ಮೂಗಿಗೆ ಬಲವಾಗಿ ಹೊಡೆದು, ಎಳೆದೊಯ್ದು ಕಾರಿಗೆ ದೂಡಿದ್ದಾರೆ. ಈ ವೇಳೆ ರಾಜೇಶ್ ಪ್ರಾಣಭಯದಿಂದ ಹೆದರಿ ಪರಾರಿಯಾಗಿದ್ದಾರೆ. ಆನಂತರ ಶೌಕತ್‌ನನ್ನು ನಿಂದಿಸಿ, ಕೊಲ್ಲುವ ಉದ್ದೇಶದಿಂದ ಮರದ ತುಂಡು, ಕಬ್ಬಿಣದ ರಾಡ್‌ಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಶೌಕತ್ ರನ್ನು ಹಲ್ಲೆ ನಡೆಸಿದ ಆರೋಪಿಗಳೇ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ, ಪರಾರಿಯಾಗಿದ್ದಾರೆ. ಗಾಯಾಳು ಶೌಕತ್‌ನನ್ನು ಪೋಷಕರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ, ಮೂಗಿಗೆ ಹೊಲಿಗೆ ಹಾಕಿಸಿದ್ದು, ನಂತರ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಲ್ಲೆ ನಡೆಸಿದ ನಾಲ್ವರು ಆರೋಪಿಗಳು ಮಂಗಳೂರಿನವರು ಎಂದು ತಿಳಿದುಬಂದಿದೆ.

Leave a Comment