ಟ್ಯಾಕ್ಸಿ ಡ್ರೈವರ್ಸ್ ಮಾರಾಮಾರಿ

ಇಬ್ಬರಿಗೆ ಚೂರಿ ಇರಿತ
ಮಂಗಳೂರು, ನ.೯- ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ನಡೆದ ಓಲಾ ಕ್ಯಾಬ್ ಮತ್ತು ಟ್ಯಾಕ್ಸಿ ಡ್ರೈವರ್‌ಗಳ ಹೊಡೆದಾಟ ಮುಂದುವರೆದಿದೆ. ಟ್ಯಾಕ್ಸಿ ಡ್ರೈವರ್ ಸರ್ಫಾಜ್ ಮತ್ತು ಸ್ಥಳೀಯ ನಿವಾಸಿ ಇಲ್ಯಾಸ್‌ಗೆ ಅವರನ್ನು ಇನ್ನೊಂದು ಗುಂಪಿನ ಟ್ಯಾಕ್ಸಿ ಚಾಲಕರು ಚೂರಿಯಿಂದ ಇರಿದು ಪರಾರಿಯಾದ ಘಟನೆ ನಿನ್ನೆ ನಡೆದಿದೆ. ಬಜ್ಪೆಯಲ್ಲಿ ನಿನ್ನೆ ಸಂಜೆ ಈ ಕೃತ್ಯ ನಡೆದಿದ್ದು ಓಲಾ ಡ್ರೈವರ್ ರಶೀದ್ ಮತ್ತು ತೌಫಿಕ್ ವಾಮಂಜೂರು ಎಂಬವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಚೂರಿ ಇರಿತದಿಂದ ತೀವ್ರ ಗಾಯಗೊಂಡ ಇಲ್ಯಾಸ್ ಮತ್ರು ಸರ್ಫಾಜ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಿನ್ನೆ ಓಲಾ ಕ್ಯಾಬ್ ಮತ್ತು ಟ್ಯಾಕ್ಸಿ ಡ್ರೈವರ್‌ಗಳ ನಡುವೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೊಡೆದಾಟ ನಡೆದಿತ್ತು. ಇದಕ್ಕೆ ಪ್ರತಿಕಾರವಾಗಿ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದ್ದು. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿನ್ನಿಪದವು ಎಂಬಲ್ಲಿ ತೆರಳುತ್ತಿದ್ದ ಕಾರಿಗೆ ಬೈಕ್ ಅಡ್ಡಬಂದಿತ್ತು. ಈ ವೇಳೆ ಕಾರಿನಲ್ಲಿದ್ದ ವಾಮಂಜೂರಿನ ರಶೀದ್ ಮತ್ತು ತೌಸೀಫ್‌ಗೆ ಬೈಕ್ ಅಡ್ಡ ಬಂದ ಬಗ್ಗೆ ವಿಚಾರಿಸಿ ನಿಂದಿಸುತ್ತಿದ್ದರು. ಅಲ್ಲೇ ಪಕ್ಕದ ಅಂಗಡಿ ಬಳಿ ನಿಂತು ಘಟನೆಯನ್ನು ಗಮನಿಸುತ್ತಿದ್ದ ಇಲ್ಯಾಸ್, ಸರ್ಫರಾಜ್ ಜಗಳವನ್ನು ಬಿಡಿಸಲು ಹೋಗಿದ್ದರು. ಈ ವೇಳೆ ನಡೆದ ಮಾತಿನ ಚಕಮಕಿಯಲ್ಲಿ ಇಲ್ಯಾಸ್, ಸರ್ಫರಾಜ್ ಅವರಿಗೆ ಕಾರಿನ ಮಾಲೀಕರಾದ ರಶೀದ್ ಮತ್ತು ತೌಸೀಫ್ ಹಲ್ಲೆ ನಡೆಸಿದ್ದಾರೆ. ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಉಪ ಪೊಲೀಸ್ ಆಯುಕ್ತ ಹನುಮಂತರಾಯ ಅವರು, ಗುರುವಾರ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಗೂ ಇಂದಿನ ಘಟನೆಗೂ ಸಂಬಂಧವಿಲ್ಲ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಓನರ್ಸ್ ಅಂಡ್ ಡ್ರೈವರ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಬಿಕೆ ಇಮ್ತಿಯಾಜ್ ಅವರು ಬಜ್ಪೆ ಕಿನ್ನಿಕಂಬ್ಳದ ಬಳಿ ಹೊಡೆದಾಟ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದಿರುವುದು. ಇಂದಿನ ಘಟನೆಗೂ ವಿಮಾನ ನಿಲ್ದಾಣದ ಟ್ಯಾಕ್ಸಿ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ

Leave a Comment