ಟ್ಯಾಂಕರ್ ಹರಿದು ನಾಲ್ವರ ದುರ್ಮರಣ

ಜೇವರ್ಗಿ,ಅ.11- ರಸ್ತೆ ಬದಿ ನಿಂತಿದ್ದವರ ಮೇಲೆ ಜವರಾಯನ ರೂಪದಲ್ಲಿ ಬಂದ ಟ್ಯಾಂಕರ್ ಹರಿದ ಪರಿಣಾಮ ನಾಲ್ವರು ಮೃತಪಟ್ಟು, ಇತರೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಧಾರುಣ ಘಟನೆ ಜೇವರ್ಗಿ ತಾಲ್ಲೂಕಿನ ಜೇರಟಗಿ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಈ ದುರ್ಘಟನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ಟ್ಯಾಂಕರ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಸ್ತೆತಡೆ ನಡೆಸಿದ್ದರಿಂದ ಈ ಮಾರ್ಗದಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು.
ಮೃತರನ್ನು ಜೇರಟಗಿ ಗ್ರಾಮದ ಶ್ರೀಕಾಂತ ದ್ಯಾವಣ್ಣ ಬಡಿಗೇರ (20), ಮೋಹಿದ್ ರಫಿಕ್ (18), ಕೋನ್ ಪಟೇಲ್ ರಂಜಣಗಿ ಮತ್ತು ಉತ್ತರ ಪ್ರದೇಶ ಮೂಲದ ಪಾನಿಪುರಿ ವ್ಯಾಪಾರಿ ಗೋಲು (25) ಎಂದು ಗುರುತಿಸಲಾಗಿದೆ.
ಅನೀಲ, ಪ್ರಕಾಶ ಮತ್ತು ವಿಜಯಕುಮಾರ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಜೇರಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜೇವರ್ಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಟ್ಯಾಂಕರ್ ಹರಿದ ಪರಿಣಾಮ ರಸ್ತೆಯ ಮೇಲೆಲ್ಲಾ ರಕ್ತ ಚೆಲ್ಲಾಡಿದೆ. ವಿಷಯ ತಿಳಿದ ಮೃತರ ಸಂಬಂಧಿಕರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದು, ಮೃತರ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.
ಸುದ್ದಿ ತಿಳಿದು ಜೇವರ್ಗಿ ಸಿಪಿಐ ಡಿ.ಬಿ.ಪಾಟೀಲ, ನೆಲೋಗಿ ಪಿಎಸ್ಐ ಸಿದ್ರಾಮ ಬಳೂರ್ಗಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
* ಜೇರಟಗಿ ಬಳಿ ರಸ್ತೆ ಅಪಘಾತ
* ರಸ್ತೆಬದಿ ನಿಂತಿದ್ದವರ ಮೇಲೆ ಜವರಾಯನಂತೆ ಹರಿದ ಟ್ಯಾಂಕರ್
* ಘಟನೆಯಲ್ಲಿ ನಾಲ್ವರ ಸಾವು, ಮೂವರಿಗೆ ಗಾಯ.
* ಗ್ರಾಮಸ್ಥರಿಂದ ಪ್ರತಿಭಟನೆ
* ವಾಹನ ಸಂಚಾರಕ್ಕೆ ಅಡ್ಡಿ
* ಸ್ಥಳಕ್ಕೆ ಆಗಮಿಸಿದ ಪೊಲೀಸರು
* ಜೇರಟಗಿ ಠಾಣೆಯಲ್ಲಿ ಪ್ರಕರಣ ದಾಖಲು.

Leave a Comment