ಟೊಮೆಟೋಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಪ್ರತಿಭಟನೆ

ಪಾವಗಡ, ಆ. ೩೧- ಟೊಮೊಟೋ ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ಟೊಮೊಟೊ ಬೆಳೆಯನ್ನು ತಹಶೀಲ್ದಾರ್ ಕಛೇರಿ ಆವರಣದಲ್ಲಿ ಸುರಿದು ರೈತ ಮತ್ತು ಹಸಿರುಸೇನೆ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ರೈತ ಮತ್ತು ಹಸಿರು ಸೇನೆ ಅಧ್ಯಕ್ಷ  ಪೂಜಾರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಮಳೆ ಇಲ್ಲದೇ ರೈತ ಕಂಗಾಲಾಗಿದ್ದಾನೆ. ಇರುವ ಅಲ್ಪಸ್ವಲ್ಪ ನೀರಾವರಿ ಇರುವ ಜಮೀನಿನಲ್ಲಿ ಟೊಮೊಟೋ ಬೆಳೆ ಬೆಳೆದಿದ್ದು, ಆದರೆ ಮಾರುಕಟ್ಟೆಯಲ್ಲಿ ಮಾತ್ರ ಸೂಕ್ತ ಬೆಲೆ ಇಲ್ಲದೇ ರೈತರು ದಿವಾಳಿಯಾಗಿದ್ದಾರೆ. ಇದೇ ರೀತಿಯಾದರೆ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಸರ್ಕಾರದ ಜತೆ ಚರ್ಚಿಸಿ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.

ತನ್ನ 8 ಎಕರೆಯಲ್ಲಿ ಟೊಮೊಟೋ ಬೆಳೆ ಬೆಳೆದು 15 ಲಕ್ಷ ರೂ. ಖರ್ಚು ಮಾಡಿ ಕೈ ಸುಟ್ಟುಕೊಂಡಿರುವ ನಾಗಲಮಡಿಕೆ ಹೋಬಳಿಯ ಪಳವಳ್ಳಿ ಗ್ರಾಮದ ರೈತ  ಸುಬ್ಬರಾಯಪ್ಪ ಟೊಮೊಟೊ ಸುರಿದು ಆಕ್ರೋಶ ವ್ಯಕ್ತಪಡಿಸಿ ಮಾತನಾಡಿ, ಕಷ್ಟಪಟ್ಟು ಕಳೆದ 6 ತಿಂಗಳಿಂದ  ಟಮೊಟೊ ಬೆಳೆಯನ್ನು ಬೆಳೆದಿದ್ದು, ಮಾರುಕಟ್ಟೆಗೆ ಹೋದರೆ 1 ಕೆ.ಜಿ.ಗೆ 1 ರೂ.ಗೆ ಕೇಳುತ್ತಿದ್ದಾರೆ, ರಾಜ್ಯದ ಇತರೆ ಮಾರುಕಟ್ಟೆಗೆ ಟೊಮೊಟೊ ಬೆಳೆ ತೆಗೆದುಕೊಂಡು ಹೋದರೆ ಬಾಕ್ಸ್‌ಗೆ 20 ರೂ. ಕೇಳುತ್ತಾರೆ ಇದರಿಂದ ನನಗೆ 15 ಲಕ್ಷ ನಷ್ಟವುಂಟಾಗಿದೆ. ಎಲ್ಲಿಯವರೆಗೂ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ದರ ಸಿಗುವುದಿಲ್ಲವೋ ಅಲ್ಲಿಯವರೆಗೂ ರೈತರಿಗೆ ನ್ಯಾಯ ಸಿಗುವುದಿಲ್ಲ ಎಂದರು.

ನಂತರ ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ಸರ್ಕಾರಕ್ಕೆ  ಈ ಬಗ್ಗೆ ಮಾಹಿತಿ ಕಳುಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಧುಗಿರಿ ಉಪವಿಭಾಗಾಧಿಕಾರಿ ಡಾ. ವೆಂಕಟೇಶಯ್ಯ, ತಹಶೀಲ್ದಾರ್ ವರದರಾಜು, ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.

Leave a Comment