ಟೈಟಾನ್ ಸಮುದ್ರದಲ್ಲಿ ತೆಳುವಾದ ಅಲೆಗಳು

ಶನಿಗ್ರಹದ ಉಪಗ್ರಹವಾದ (ಚಂದ್ರ) ಟೈಟಾನ್‌ನಲ್ಲಿಯ ಸಮುದ್ರದಲ್ಲಿ ಒಂದು ಅಂಗುಲಕ್ಕೂ ಕಡಿಮೆ ಎತ್ತರದ ಅಲೆಗಳು ಏಳುತ್ತಿವೆ ಎಂದು ಅಧ್ಯಯನ ವರದಿ ಹೇಳಿದೆ.

ಶನಿಗ್ರಹದ ವರ್ತುಲಗಳ ನಿಗೂಢತೆ ಮತ್ತು ಇದರ ಉಪಗ್ರಹ ಟೈಟಾನ್ ನಲ್ಲಿ ದ್ರವರೂಪದಲ್ಲಿರುವ ಹೈಡ್ರೋ ಕಾರ್ಬನ್ ಸರೋವರ, ಸಮುದ್ರದ  ಶೋಧನೆಯಲ್ಲಿರುವ ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆ ಸರೋವರಗಳಲ್ಲಿ ತೆಳುವಾದ ಅಲೆಗಳು ಏಳುವುದನ್ನು ಪತ್ತೆ ಹಚ್ಚಿದೆ.

ಕ್ಯಾಸಿನಿ ಬಾಹ್ಯಾಕಾಶ ನೌಕೆ ಕ್ಯಾಮರಾದಲ್ಲಿರುವ ಇನ್ಫ್ರಾರೆಡ್ ಕಿರಣಗಳ ಮೂಲಕ ಗಮಿನಿಸಿರುವ ಈ ಅಲೆಗಳು ಒಂದು ಅಂಗುಲಕ್ಕಿಂತ ಕಡಿಮೆ ಎತ್ತರದವು.

1997 ರಲ್ಲಿ ಯಾನ ಆರಂಭಿಸಿದ ಕ್ಯಾಸಿನಿ ಬಾಹ್ಯಾಕಾಶ ನೌಕೆ 12 ವರ್ಷಗಳ ಯಾನದ ನಂತರ 2004 ರಿಂದ ಶನಿಗ್ರಹದ ಕಕ್ಷೆಯಲ್ಲಿ, ಶೋಧನಾ ಕಾರ್ಯನಿರ್ವಹಿಸುತ್ತಿದ್ದು, ಇದೇ ವರ್ಷ ತನ್ನ ಯಾನಕ್ಕೆ ಮುಕ್ತಾಯ ಹೇಳುತ್ತಿದೆ.

ಟೈಟಾನ್‌ನ ಉತ್ತರ ಧ್ರುವದ ಹತ್ತಿರದ ಮೂರು ಸಮುದ್ರಗಳಲ್ಲಿ ತೆಳುವಾದ ಅಲೆಗಳನ್ನು ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯ ಕ್ಯಾಮರಾದ ಇನ್ಫ್ರಾರೆಡ್ ಕಿರಣಗಳ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ಟೆಕ್ಸಾಸ್ ವಿಶ್ವವಿದ್ಯಾನಿಲಯದ ಭೂಭೌತ ವಿಭಾಗದ ಅಧ್ಯಯನ ತಂಡದ ವಿಜ್ಞಾನಿ ಸೈರಿಲ್ ಗ್ರಿಮಾ ಹೇಳಿದ್ದಾರೆ.

ಟೈಟಾನ್ ಉತ್ತರ ಧ್ರುವದಲ್ಲಿ ದ್ರವರೂಪದ ಹೈಡ್ರೋಕಾರ್ಬನ್‌ನ ಸಮುದ್ರ ಸರೋವರಗಳಿವೆ. ಇವುಗಳ 3 ಸರೋವರಗಳಲ್ಲಿ ತೆಳುವಾದ ಅಲೆಗಳು ಏಳುತ್ತಿವೆ. ಈ ಅಲೆಗಳು ಕೇವಲ 0.25 ಅಂಗುಲ (1 ಸೆಂ.ಮೀ.) ಎತ್ತರ ಮತ್ತು ಸುಮಾರು 8 ಅಂಗುಲ (20 ಸೆಂ. ಮೀ.) ಉದ್ದದಷ್ಟಿದೆ ಎಂದು ಅಧ್ಯಯನ ವರದಿಯಲ್ಲಿ ಹೇಳಿದೆ.

ಈ ಅಧ್ಯಯನ ವರದಿ ಅರ್ಥ್ ಅಂಡ್ ಪ್ಲಾನೇಟರಿ ಸೈನ್ಸ್‌ನಲ್ಲಿ ಇತ್ತೀಚೆಗೆ ಪ್ರಕಟವಾಗಿದೆ.

ಟೈಟಾನ್‌ನ ಸಮುದ್ರ ಸರೋವರಗಳಲ್ಲಿರುವುದು, ಭೂಮಿಯ ರೀತಿಯ ನೀರಿನ ಬದಲಿಗೆ ದ್ರವೀಕರಣಗೊಂಡ ಹೈಡ್ರೋಕಾರ್ಬನ್ ಮತ್ತು ಮಿಥೇನ್ ಇದಕ್ಕೆ ಕಾರಣ. ಅದರ ವಾತಾವರಣವೇ ಹೈಡ್ರೋಕಾರ್ಬನ್ ಮೂಲದ್ದಾಗಿದೆ. ಹೀಗಾಗಿ ಇಲ್ಲಿ ಇಥೇನ್ ಮತ್ತು ಮಿಥೇನ್ ಮಳೆಯಾಗುತ್ತದೆ. ಹರಿದ ಇದರ ದ್ರವ ಸರೋವರಗಳಾಗುತ್ತವೆ. ಈ ಸರೋವರಗಳು ಜೀವಾಧಾರಿತ ಅಂಶಗಳನ್ನು ಹೊಂದಿದೆ ಎಂದು ಕೆಲವು ವಿಜ್ಞಾನಿಗಳು ಭಾವಿಸಿದ್ದಾರೆ.

2005 ರಲ್ಲಿ ಕ್ಯಾಸಿನಿ ಬಾಹ್ಯಾಕಾಶ ನೌಕೆಯಿಂದ ಹುಗೈನ್ಸ್ ಏಣಿ (ಲ್ಯಾಂಡರ್) ಟೈಟಾನ್ ಮೇಲ್ಮೈ ಮೇಲೆ ಇಳಿದಿತ್ತು.

ಟೈಟಾನ್ ಸಮುದ್ರ ಶೋಧಕ್ಕೆ ನೌಕೆ ಹಾಗೂ ಸಬ್ ಮರಿನ್‌ಗಳನ್ನು ಕಳುಹಿಸುವ ಕುರಿತಂತೆ ನಾಸಾ ಸೇರಿದಂತೆ ಹಲವು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಯೋಜನೆ ರೂಪಿಸುತ್ತಿವೆ.

ಶನಿಗ್ರಹ ವರ್ತುಲಗಳು

ಶನಿಗ್ರಹದ ವರ್ತುಲಗಳ ನಿಗೂಢತೆ ಮತ್ತು ಅದರ ಉಪಗ್ರಹ ಟೈಟಾನ್‌ನ ಶೋಧನೆಯಲ್ಲಿ ಕ್ಯಾಸಿನಿ ನೌಕೆ ಕಾರ್ಯನಿರ್ವಹಿಸುತ್ತಿದೆ.

3200 ಮೈಲಿ ಅಗಲದ ಟೈಟಾನ್ (ಚಂದ್ರನಲ್ಲಿ)  ಹೈಡ್ರೋಕಾರ್ಬನ್ ಮತ್ತು ಮಿಥೇನ್ ದ್ರವ ರೂಪದ ಸಮುದ್ರ ಮತ್ತು ಸರೋವರಗಳಿದ್ದು, ಇವುಗಳ ಇನ್ನಷ್ಟು ಶೋಧನೆಗೆ ನಾಸಾ ಭಾರಿ ಉತ್ಸುಕವಾಗಿದೆ.

ಸೌರಮಂಡಲದಲ್ಲಿಯ ಗ್ರಹಗಳ ಪೈಕಿ ಶನಿಗ್ರಹದ ಉಪಗ್ರಹ (ಚಂದ್ರ) ಟೈಟಾನ್ ಬಹುದೊಡ್ಡ ಉಪಗ್ರಹ. ಇದರ ಮೇಲ್ಮೈ ಒತ್ತಡ ಭೂಮಿಯ ಮೇಲಿನ ಒತ್ತಡಕ್ಕಿಂತ ಸ್ವಲ್ಪ ಅಧಿಕ. ಭೂ ವಾತಾವರಣವನ್ನು ಹೋಲುವ ಅಂಶಗಳು ಇಲ್ಲಿದ್ದು, ಜೈವಿಕ ವಾತಾವರಣ ಇರುವ ಸಾಧ್ಯತೆ ಬಗ್ಗೆ ವಿಜ್ಞಾನಿಗಳು ಕುತೂಹಲ ಹೊಂದಿದ್ದಾರೆ.

ತಾರಾಮಂಡಲದಲ್ಲಿ 6ನೇ ಗ್ರಹವಾದ ಶನಿಗ್ರಹ ವರ್ತುಲಗಳು ಕುತೂಹಲಕ್ಕೆ ಕಾರಣವಾಗಿವೆ. 1965 ರಲ್ಲಿಯೇ ಕ್ರಿಸ್ಟಿಯನ್ ಹುಗೈನ್ಸ್ ಹೆಸರಿನ ವಿಜ್ಞಾನಿ ಶನಿಗ್ರಹದ ಸುತ್ತಲಿನ ವರ್ತುಲಗಳನ್ನು ಪತ್ತೆ ಮಾಡಿದ್ದ.

ಭೂಮಿಯಿಂದ 1,277,400,000 ಕಿ.ಮೀ. ದೂರದಲ್ಲಿರುವ ಶನಿಗ್ರಹದ ವರ್ತುಲಗಳ ಒಟ್ಟು ವಿಸ್ತೀರ್ಣ 2,72,000 ಕಿ.ಮೀ. ಮತ್ತು ದಪ್ಪ 25 ಕಿ.ಮೀ. ಇದ್ದು, ಈ ಗ್ರಹಕ್ಕೆ 7 ವರ್ತುಲಗಳಿವೆ. ಆದರೆ ಪ್ರಧಾನವಾಗಿ ಕಾಣುವುದು 3 ವರ್ತುಲಗಳು. ಅಕ್ಟೋಬರ್ 15, 1997 ರಲ್ಲಿ ಶನಿ ಗ್ರಹದ ಶೋಧನೆಗಾಗಿ ಜಿಗಿದಿದ್ದ ಕ್ಯಾಸಿನಿ ಬಾಹ್ಯಾಕಾಶ ನೌಕೆ 12 ವರ್ಷಗಳ ಯಾನದ ನಂತರ 2004ರ ಜುಲೈ 1 ರಂದು ಶನಿಗ್ರಹದ ಕಕ್ಷೆಗೆ ಸೇರಿತ್ತು. ಕ್ಯಾಸಿನಿ ಯಾನದ ಇದು ಅಂತಿಮ ವರ್ಷ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಗ್ರಹಕ್ಕೆ ಅಪ್ಪಳಿಸುವ ಮೂಲಕ ತನ್ನ ಯಾನವನ್ನು ಮುಗಿಸುತ್ತಿದೆ.

25 ಡಿಸೆಂಬರ್ 2004 ರಂದು ಹುಗೈನ್ಸ್ ತನ್ನ ಮಾತೃ ನೌಕೆ ಕ್ಯಾಸಿನಿಯಿಂದ ಬೇರ್ಪಟ್ಟು 2005ರ ಜನವರಿ 14 ರಂದು ಟೈಟಾನ್ ನಲ್ಲಿ ಇಳಿದಿತ್ತು.

ಖಗೋಳ ವಿಜ್ಞಾನಿಗಳಾದ ಗಿಯೋವನ್ನಿ ಕ್ಯಾಸಿನಿ ಮತ್ತು ಕ್ರಿಸ್ಟಿಯಾನಿ ಹುಗೈನ್ಸ್ ಹೆಸರಿನಲ್ಲಿಯೇ ಈ ನೌಕೆಗಳಿಗೆ ಕ್ಯಾಸಿನಿ ಮತ್ತು  ಹುಗೈನ್ಸ್ ಎಂದು ಹೆಸರಿಸಲಾಗಿದೆ.

– ಉತ್ತನೂರು ವೆಂಕಟೇಶ್

Leave a Comment