ಟೆಸ್ಟ್ ಕ್ರಿಕೆಟ್ : ಭಾರತಕ್ಕೆ ಅಗ್ರ ಪಟ್ಟ
ಇಂದೋರ್. ನ ೧೭- ಟೆಸ್ಟ್ ಕ್ರಿಕೆಟ್ನಲ್ಲಿ ಗೆಲುವಿನ ನಾಗಲೋಟ ಮುಂದುವರೆಸಿರುವ ಭಾರತೀಯ ಕ್ರಿಕೆಟ್ ತಂಡ ಒಟ್ಟು ೩೦೦ ಅಂಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಗ್ರಪಟ್ಟಕ್ಕೇರಿದೆ.
ನಿನ್ನೆಯಷ್ಟೇ ಇಂದೋರ್ನಲ್ಲಿ ಅಂತ್ಯಗೊಂಡ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ ೧೩೦ ರನ್ ಅಂತರದಿಂದ ಕೊಹ್ಲಿ ಪಡೆ ಭರ್ಜರಿ ಜಯ ದಾಖಲಿಸಿತ್ತು. ಈ ಅಭೂತಪೂರ್ವ ಗೆಲುವಿನೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಸೋಲಿಲ್ಲದ ಸರದಾರನಾಗಿ ಮಿಂಚುತ್ತಿದೆ.
ಮೊದಲ ಟೆಸ್ಟ್ನಲ್ಲಿ ಕರ್ನಾಟಕದ ಮಯಾಂಕ್ ಅಗರ್ವಾಲ್ ಬಿರುಸಿನ ದ್ವಿಶತಕ, ಅಜಿಂಕ್ಯಾ ರಹಾನೆ ೮೬, ರವೀಂದ್ರ ಜಡೇಜಾ ಅಜೇಯ ೬೦ ಹಾಗೂ ಚೇತೇಶ್ವರ್ ಪೂಜಾರ ಅವರ ಅರ್ಧ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಿತ್ತು. ಆನಂತರ ಬಾಂಗ್ಲಾದೇಶವನ್ನು ಭಾರತೀಯ ಬೌಲರ್ಗಳು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ್ದರಿಂದ ಇನ್ನು ಎರಡು ದಿನ ಆಟ ಬಾಕಿಯಿರುವಾಗಲೇ ಎರಡು ಟೆಸ್ಟ್ಗಳ ಸರಣಿಯಲ್ಲಿ ಭಾರತ ೧-೦ಯಿಂದ ಮುನ್ನಡೆ ಸಾಧಿಸಿದೆ.
ಈ ಜಯದೊಂದಿಗೆ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ೬೦ ಅಂಕಗಳಿಸಿದ ಕೀರ್ತಿಗೆ ಪಾತ್ರವಾಗಿದೆ. ವೆಸ್ಟ್ ಇಂಡೀಸ್ ಹಾಗೂ ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರೀ ಅಂತರದಿಂದ ಭಾರತ ಗೆಲುವು ಸಾಧಿಸಿತ್ತು. ಆಗಲು ೨೪೦ ಅಂಕಗಳೊಂದಿಗೆ ಭಾರತ ಅಗ್ರ ಸ್ಥಾನಕ್ಕೇರಿತ್ತು.
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಮಿಂಚಿದ ಭಾರತ ೬೦ ಅಂಕ ಕಲೆಹಾಕಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಒಟ್ಟು ೩೦೦ ಅಂಕಗಳನ್ನು ಕಲೆಹಾಕಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಪ್ರಸ್ತುತ ಅಂಕಪಟ್ಟಿಯಲ್ಲಿ ೬೦ ಅಂಕಹೊಂದಿರುವ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ. ಶ್ರೀಲಂಕಾ ತಂಡವು ೬೦ ಅಂಕಗಳೊಂದಿಗೆ ೩ನೇ ಸ್ಥಾನದಲ್ಲಿದ್ದರೆ, ೫೬ ಅಂಕಗಳಿಸಿರುವ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
೨೦೧೨ರ ಬಳಿಕ ಭಾರತ ತಂಡ ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿ ಸೋತಿಲ್ಲದಿರುವುದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳಲು ಪ್ರಮುಖ ಕಾರಣವಾಗಿದೆ. ಈ ತಿಂಗಳ ೨೨ ರಿಂದ ಕೋಲ್ಕತ್ತಾದಲ್ಲಿ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಹಗಲು- ರಾತ್ರಿ mಸ್ಟ್ ಪಂದ್ಯವಾಗಿದೆ. ಈ ಪಂದ್ಯ ಪ್ರವಾಸಿ ತಂಡಕ್ಕೆ ಸವಾಲಾಗಿ ಪರಿಣಮಿಸಿದೆ.