ಟೆಂಪೊ ಕಾರು ಮುಖಾಮುಖಿ ಡಿಕ್ಕಿ: ನಾಲ್ವರ ದುರ್ಮರಣ

ಧಾರವಾಡ, ಜ 14: ಟೆಂಪೊ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನ್ವಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಪಿ.ಬಿ ರಸ್ತೆ ಸಮೀಪ ಯರಿಕೊಪ್ಪ ಕ್ರಾಸ್ ಬಳಿ ಇಂದು ಮದ್ಯಾಹ್ನ ಸಂಭವಿಸಿದೆ.
ಮಂಜುನಾಥ ಎಂಬುವವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹೆಸರು ತಿಳಿದು ಬಂದಿಲ್ಲ. ಇವರೆಲ್ಲರೂ ಕೊಪ್ಪಳ ಜಿಲ್ಲೆಗೆ ಸೇರಿದವರೆಂದು ತಿಳಿದು ಬಂದಿದೆ. ಯರಿಕೊಪ್ಪ ಕ್ರಾಸ್ ಬಳಿ ಟೀ ಕುಡಿದು ಅಲ್ಲಿಂದ ಹುಬ್ಬಳ್ಳಿ ಮಾರ್ಗವಾಗಿ ಹೊರಡುವ ಸಂದರ್ಭದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇಬ್ಬರು ಚಿಕ್ಕ ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಟೆಂಪೊ ಹುಬ್ಬಳ್ಳಿಯಿಂದ ಬೆಳಗಾವಿ ಮಾರ್ಗವಾಗಿ ಹೊರಟಿತ್ತು. ಕಾರು ಬೆಳಗಾವಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭಿವಿಸಿದೆ.
ಸ್ಥಳಕ್ಕೆ ಧಾರವಾಡ ಎಸ್‍ಪಿ ವರ್ತಿಕಾ ಕಟಿಯಾರ್, ಡಿ.ಎಸ್.ಪಿ ರವಿ ನಾಯಕ, ಸಿಪಿಐ ಶಿವಾನಂದ ಕಮತಗಿ, ಪಿಎಸ್‍ಐ ರವಿ ನಾಯಕ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment