ಟೆಂಡರ್ ಶ್ಯೂರ್ ಕಾಮಗಾರಿ ಚುರುಕುಗೊಳಿಸಲು ಮೇಯರ್ ಸೂಚನೆ

ಬೆಂಗಳೂರು, ಜ. ೧೧- ನಗರದ ಮೋದಿ ಆಸ್ಪತ್ರೆ ರಸ್ತೆಯಲ್ಲಿ 10.5 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಟೆಂಡರ್ ಶ್ಯೂರ್ ಕಾಮಗಾರಿಯನ್ನು ಚುರುಕುಗೊಳಿಸಿ ಫೆಬ್ರವರಿ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕೆಂದು ಮೇಯರ್ ಜಿ. ಪದ್ಮಾವತಿ ಅವರು ಕಟ್ಟಪ್ಪಣೆ ಮಾಡಿದ್ದಾರೆ.
ನಾಗರಿಕರ ದೂರಿನ ಹಿನ್ನೆಲೆಯಲ್ಲಿ ಇಂದು ಟೆಂಡರ್ ಶ್ಯೂರ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಕಾಮಗಾರಿ ವಿಳಂಬ ಗತಿಯಲ್ಲಿ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಕುರುಬರಹಳ್ಳಿಯಿಂದ ವೆಸ್ಟ್ ಆಫ್ ಕಾರ್ಡ್ ರೋಡ್‌ವರೆಗೆ ನಡೆಯುತ್ತಿರುವ ಕಾಮಗಾರಿ ವೇಳೆ ಪಾದಚಾರಿ ಮಾರ್ಗ ಮತ್ತು ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸ್ಥಳೀಯ ನಿವಾಸಿಗಳು ಮೇಯರ್‌ರವರಲ್ಲಿ ಮನವಿ ಮಾಡಿದರು. ವಿದ್ಯುತ್ ಕೇಬಲ್‌ಗಳನ್ನು ಟೆಂಡರ್ ಶ್ಯೂರ್ ಅನ್ವಯ ಪಾದಚಾರಿ ರಸ್ತೆಯ ಕೆಳಭಾಗದಲ್ಲಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಟೆಂಡರ್ ಶ್ಯೂರ್ ಕಾಮಗಾರಿ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದಾರೆ. ಈ ಭಾಗದಲ್ಲಿ ಜಲಮಂಡಳಿ ಪೈಪುಗಳು ಹಾಗೂ ಓಎಫ್‌ಸಿ ಕೇಬಲ್‌ಗಳನ್ನು ಅಳವಡಿಸಿದ ಬಳಿಕ ಕಾಮಗಾರಿ ತ್ವರಿತವಾಗಿ ನಡೆಯಲಿದೆ ಎಂದು ತಿಳಿಸಿದರು.
ಈ ಮಧ್ಯೆ ಸ್ಥಳದಲ್ಲಿ ಹಾಜರಿದ್ದ ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಭದ್ರೇಗೌಡರವರು ಸರ್ಕಾರ ರಚಿಸಿರುವ ಹೈಪವರ್ ಕಮಿಟಿಯನ್ನು ರದ್ದುಪಡಿಸುವಂತೆ ಪಟ್ಟು ಹಿಡಿದು ತಮ್ಮ ಅಸಮಾಧಾನವನ್ನು ಮೇಯರ್ ಎದುರು ಹೊರಹಾಕಿದರು.
ನಂತರ ಮೇಯರ್‌ರವರು ಕೆಎಚ್‌ಬಿ ಕಾಲೋನಿ ಬಳಿ ನಿರ್ಮಾಣವಾಗುತ್ತಿರುವ ಕೆಳಸೇತುವೆ ಕಾಮಗಾರಿಯನ್ನು ಪರಿಶೀಲಿಸಿ ಮಂದಗತಿಯಲ್ಲಿ ನಡೆದಿರುವುದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕೆಳಸೇತುವೆ ಕಾಮಗಾರಿಯಲ್ಲಿ ಸಿಮೆಂಟ್ ಕ್ಯೂರಿಂಗ್‌ಗಾಗಿ ಸಾಕಷ್ಟು ಸಮಯ ಹಿಡಿಯಲಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಸಿಟ್ಟಿಗೆದ್ದ ಮೇಯರ್ ಈಗಾಗಲೇ ಕಾಮಗಾರಿ ಸಾಕಷ್ಟು ವಿಳಂಬವಾಗಿದೆ. ಹಾಗಾಗಿ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಒಪ್ಪಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕ ಮಹಮ್ಮದ್ ರಿಜ್ವಾನ್ ಪಾಲಿಕೆ ಸದಸ್ಯರು ಹಾಗೂ ಪ್ರಧಾನಿ ಇಂಜಿನಿಯರ್ ಕೆ.ಟಿ. ನಾಗರಾಜ್, ಮತ್ತಿತರರು ಉಪಸ್ಥಿತರಿದ್ದರು.

Leave a Comment