ಟೆಂಡರ್ ನಿಯಮ ಉಲ್ಲಂಘನೆ : ಅಸಮಾಧಾನ

ಸ್ಟೇಷನ್ ವೃತ್ತ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
* ನಾಲ್ಕು ಲ್ಯಾನಿಂಗ್ ಬದಲು ಎರಡು ಲ್ಯಾನಿಂಗ್‌ಗೆ ಸೀಮಿತ
ರಾಯಚೂರು.ಸೆ.12- ಸ್ಟೇಷನ್ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ 167 ಕಾಮಗಾರಿ ಟೆಂಡರ್ ನಿಯಮಗಳನ್ವಯ ನಡೆಯುತ್ತಿಲ್ಲ ಎನ್ನುವ ಸಾರ್ವಜನಿಕರ ದೂರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗ ಕವಡೆ ಕಿಮ್ಮತ್ತು ನೀಡುತ್ತಿಲ್ಲ.
ರಾಯಚೂರು ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ 167 ಕಾಮಗಾರಿ ಫೋರ್ ಲ್ಯಾನಿಂಗ್ ಕಾಮಗಾರಿ ಕೈಗೊಳ್ಳಬೇಕೆಂಬ ಸ್ಪಷ್ಟ ಆದೇಶವಿದ್ದರೂ, ಸ್ಟೇಷನ್ ವೃತ್ತದಲ್ಲಿ ಮಾತ್ರ ನಿರ್ದಿಷ್ಟ ಅಳತೆಗಿಂತ ರಸ್ತೆ ಅಗಲದಲ್ಲಿ ಕಡಿಮೆಯಾಗಿದೆ. ಅತ್ಯಂತ ಜನ ಸಂದಣಿಯ ಪ್ರದೇಶವಾದ ಸ್ಟೇಷನ್ ವೃತ್ತದಲ್ಲಿ ನಾಲ್ಕು ಲ್ಯಾನಿಂಗ್ ರಸ್ತೆ ನಿರ್ಮಾಣಕ್ಕೆ ಜನರು ನಿರಂತರ ಒತ್ತಾಯಿಸುತ್ತಿದ್ದರೂ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನ ಹರಿಸದಿರುವುದು ಅಚ್ಚರಿಯಾಗಿದೆ.
ರಸ್ತೆಯ ಒಂದು ಬದಿಯಲ್ಲಿ ಚರಂಡಿ ನಿರ್ಮಿಸುವ ಯೋಜನೆಯಿದ್ದರೂ, ಸ್ಟೇಷನ್ ವೃತ್ತದಲ್ಲಿ ಮಾತ್ರ ಚರಂಡಿ ನಿರ್ಮಾಣ ಕೈಬಿಟ್ಟು ಕೇವಲ ಪೈಪ್‌ವೊಂದನ್ನು ಅಳವಡಿಸಲಾಗುತ್ತಿದೆ. ಸಂಸದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ಜಿಲ್ಲಾಡಳಿತ ಗಮನಕ್ಕೂ ಈ ಪ್ರಕರಣ ಬಗ್ಗೆ ಮಾಹಿತಿ ನೀಡಿದ್ದರೂ, ಯಾವುದೇ ಉಪಯೋಗವಾಗಿಲ್ಲ. ಪದೇ ಪದೇ ರಸ್ತೆ ನಿಗದಿತ ಅಳತೆಯಲ್ಲಿ ನಿರ್ಮಿಸುವಂತೆ ಒತ್ತಾಯಿಸುತ್ತಿದ್ದರೂ, ಯಾರು ಕೇಳುತ್ತಿಲ್ಲ.
1999 ರಲ್ಲಿ ಈ ರಸ್ತೆಯ ಒಂದು ಕಟ್ಟಡಕ್ಕೆ ತಡೆಯಾಜ್ಞೆ ಇದೆ. ಆದರೆ, 2012 ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಈ ರಸ್ತೆ ಪರಿವರ್ತನೆಗೊಂಡ ನಂತರ ನ್ಯಾಯಾಲಯ ವ್ಯಾಪ್ತಿ ಬದಲಾಗಿದೆ. ಆದರೂ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದ್ಯಾವುದನ್ನೂ ಪರಿಶೀಲಿಸದೇ, ಅತ್ಯಂತ ಮುಖ್ಯ ರಸ್ತೆಯೆಂದು ಗುರುತಿಸಿಕೊಂಡ ಸ್ಟೇಷನ್ ವೃತ್ತದಲ್ಲಿ ರಸ್ತೆಯ ಅಗಲದ ಅಳತೆಯಲ್ಲಿ ವ್ಯತ್ಯಾಸವಿದೆ.
ನಾಲ್ಕು ಲ್ಯಾನಿಂಗ್‌ಗಳಲ್ಲಿ ನಿರ್ಮಿಸಬೇಕಾದ ರಸ್ತೆ, ಕೇವಲ ಎರಡು ಲ್ಯಾನಿಂಗ್‌ಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು. ಶಾಸಕ ಡಾ.ಶಿವರಾಜ ಪಾಟೀಲ್ ಅವರು ಈ ಬಗ್ಗೆ ಗಮನ ಹರಿಸಬೇಕೆನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ ನಿಯಮ ಉಲ್ಲಂಘಿಸಿ, ನಿರ್ಮಾಣಗೊಳ್ಳುತ್ತಿರುವ ಈ ರಸ್ತೆ ಬಗ್ಗೆ ತಕ್ಷಣವೇ ಸಂಬಂಧಪಟ್ಟವರ ಗಮನ ಸೆಳೆದೂ, ನಿರ್ದಿಷ್ಟ ಟೆಂಡರ್ ನಿಯಮಗಳನ್ವಯ ಕಾಮಗಾರಿ ಕೈಗೊಳ್ಳುವಂತೆ ಸ್ಪಷ್ಟ ಆದೇಶ ಹೊರಡಿಸಲು ಸೂಚಿಸಬೇಕೆಂದು ಜನರ ಒತ್ತಾಯವಾಗಿದೆ.

Leave a Comment