ಟೀ ಮಾರಾಟ ಮಾಡಿ ಹರೀಶ್ ಜೀವನ ನಿರ್ವಹಣೆ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಆಟಗಾರ

ನವದೆಹಲಿ, ಸೆ ೧೦- ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ ಪದಕ ಗೆದ್ದ ಆಟಗಾರ ಹರೀಶ್ ಕುಮಾರ್ ಪದಕ ಗೆದ್ದರೂ ಕಿತ್ತು ತಿನ್ನುವ ಬಡತನದಿಂದ ಟೀ ಮಾರಾಟಕ್ಕಿಳಿದಿದ್ದಾರೆ.

ಬಡತನ ಮನುಷ್ಯನ ಆಸೆಗಳಿಗೆ ತಣ್ಣೀರೆರಚುತ್ತದೆ. ಸಾಧಿಸುವ ಛಲವಿದ್ರೂ ಹೊಟ್ಟೆ ತುಂಬಿಸಿಕೊಳ್ಳಲು ಜನರು ಕನಸನ್ನು ಬಲಿ ನೀಡುತ್ತಾರೆ. ಕಿತ್ತು ತಿನ್ನುವ ಬಡತನದ ಮಧ್ಯೆಯೇ ದೇಶದ ಕೀರ್ತಿ ಪತಾಕೆ ಹಾರಿಸಿದ ಹರೀಶ್ ಕುಮಾರ್ ಪರಿಸ್ಥಿತಿಯೂ ಅದೇ ಆಗಿದೆ.

ಏಷ್ಯನ್ ಗೇಮ್ಸ್‌ನ ಸೆಪಕ್ ಟಕ್ರಾವ್‌ನಲ್ಲಿ ಭಾರತ ಮೊದಲ ಬಾರಿ ಪದಕ ಗೆಲ್ಲಲು ಕಾರಣವಾದ ಆಟಗಾರನಾದ ಹರೀಶ್ ಹೊಟ್ಟೆ ತುಂಬಿಸಿಕೊಳ್ಳಲು ಟೀ ಮಾರಾಟಕ್ಕಿಳಿದಿದ್ದಾರೆ. ಪದಕ ಗೆದ್ದ ನಂತರವೂ ಹರೀಶ್ ಪರಿಸ್ಥಿತಿ ಸುಧಾರಿಸಿಲ್ಲ. ಮನೆಯಲ್ಲಿರುವ ಸದಸ್ಯರ ಸಂಖ್ಯೆ ಹೆಚ್ಚು. ದುಡಿಯುವ ಕೈಗಳು ಕಡಿಮೆ. ಹಾಗಾಗಿ ಹರೀಶ್ ತಂದೆ ಜೊತೆ ಟೀ ಮಾರಾಟ ಮಾಡ್ತಾರೆ.

ಟೀ ಮಾರಾಟ ಜೊತೆಗೆ ದಿನಕ್ಕೆ ನಾಲ್ಕು ಗಂಟೆ ಅಭ್ಯಾಸ ಮಾಡ್ತಾರಂತೆ. ದೇಶದ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಆಸೆ ಹರೀಶ್ ರದ್ದು. ಹರೀಶ್ ೨೦೧೧ರಲ್ಲಿ ಅಭ್ಯಾಸ ಶುರು ಮಾಡಿದ್ದರಂತೆ. ಅವರ ಕೋಚ್ ಹೇಮ್ರಾಜ್, ಹರೀಶ್ ಟೈರ್ ಜೊತೆ ಆಟವಾಡುವುದನ್ನು ನೋಡಿ ಭಾರತದ ಕ್ರೀಡಾ ಪ್ರಾಧಿಕಾರ ಕಚೇರಿಗೆ ಕರೆದುಕೊಂಡು ಹೋಗಿದ್ದರಂತೆ. ಅಲ್ಲಿಂದ ಹರೀಶ್‌ಗೆ ಕಿಟ್ ಹಾಗೂ ಸ್ವಲ್ಪ ಫಂಡ್ ಸಿಗಲು ಶುರುವಾಗಿತ್ತಂತೆ. ಹರೀಶ್ ಸಾಧನೆಗೆ ಬೆನ್ನೆಲುಬಾಗಿರುವ ಕುಟುಂಬಸ್ಥರು ಕೋಚ್‌ಗೆ ಧನ್ಯವಾದ ಹೇಳಿದ್ದಾರೆ. ಉತ್ತಮ ಕೆಲಸ ಪಡೆಯಬೇಕೆಂಬ ಆಸೆ ಹರೀಶ್ ಗಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

Leave a Comment