ಟೀಮ್‌ ಇಂಡಿಯಾ ಅಭ್ಯಾಸದ ವೇಳೆ ಕಾಣಿಸಿಕೊಂಡ ರಾಹುಲ್‌ ದ್ರಾವಿಡ್‌

ಬೆಂಗಳೂರು, ಸೆ 20 – ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟಿ-20 ಪಂದ್ಯ ಗೆದ್ದು ಸಿಲಿಕಾನ್‌ ಸಿಟಿ ಬೆಂಗಳೂರಿಗೆ ಆಗಮಿಸಿರುವ ಟೀಮ್ ಇಂಡಿಯಾ ಇಂದು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತು ನೆಟ್ಸ್‌ನಲ್ಲಿ ಆಟಗಾರರು ಕಠಿಣ ತಾಲೀಮು ನಡೆಸುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌ ಕಾಣಿಸಿಕೊಂಡರು.
ಭಾನುವಾರ ಮೂರನೇ ಟಿ-20 ಪಂದ್ಯದ ನಿಮಿತ್ತ ಮೊದಲ ದಿನ ಅಭ್ಯಾಸ ಆರಂಭಿಸಿದ ಭಾರತ ತಂಡಡ ಆಟಗಾರರು ಬಿ ಮೈದಾನದಲ್ಲಿ ನೆಟ್ಸ್‌ ಮಾಡಿದರು. ಮಾಜಿ ನಾಯಕ ಹಾಗೂ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥ ರಾಹುಲ್‌ ದ್ರಾವಿಡ್‌ ಕೆಲ ಕಾಲ ಮುಖ್ಯ ಕೋಚ್‌ ರವಿಶಾಸ್ತ್ರಿ ಅವರೊಂದಿಗೆ ಮಾತುಕತೆ ನಡೆಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದ ವಿದಾಯ ಹೇಳಿದ್ದ ಬಳಿಕ ರಾಹುಲ್‌ ಕ್ರಿಕೆಟ್‌ ಕೋಚಿಂಗ್‌ ಎರಡನೇ ಇನಿಂಗ್ಸ್‌ ಆರಂಭಿಸಿದ್ದರು. 19 ವಯೋಮಿತಿ ಭಾರತ ತಂಡ ಹಾಗೂ ಭಾರತ (ಎ) ತಂಡದ ಮುಖ್ಯ ಕೋಚ್‌ ಆಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ದ್ರಾವಿಡ್‌, ಹಲವು ಪ್ರತಿಭಾವಂತ ಆಟಗಾರರನ್ನು ತಯಾರು ಮಾಡಿದ್ದಾರೆ. ಆ ಮೂಲಕ ಟೀಮ್‌ ಇಂಡಿಯಾಗೆ ಯುವ ಆಟಗಾರರನ್ನು ನೀಡಿದರು. ಅಲ್ಲದೇ, ಭಾರತ ತಂದ ಬೆಂಚ್‌ ಆಟಗಾರರನ್ನು ಬಲಿಷ್ಟಗೊಳಿಸಿದರು.
ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ಮಯಾಂಕ್‌ ಅಗರ್ವಾಲ್‌, ಶುಭಮನ್ ಗಿಲ್‌, ಪೃಥ್ವಿ ಶಾ ಸೇರಿದಂತೆ ಹಲವು ಪ್ರತಿಭಾವಂತ ಆಟಗಾರರನ್ನು ಭಾರತ ತಂಡಕ್ಕೆ ಕೊಡುಗೆ ನೀಡಿದ್ದರು.
ಮೊಹಾಲಿಯಲ್ಲಿ ಮೊದಲನೇ ಪಂದ್ಯ ಗೆದ್ದಿರುವ ಭಾರತ ತಂಡ, ಭಾನುವಾರದ ಪಂದ್ಯ ಗೆದ್ದು ಕೊಹ್ಲಿ ಪಡೆಗೆ ಚುಟುಕು ಸರಣಿ ಗೆಲುವಿಗೆ ದ್ರಾವಿಡ್‌ ಅವರ ಸಲಹೆ ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ-20 ವಿಶ್ವಕಪ್‌ಗೆ ಬಲಿಷ್ಟ ತಂಡ ಕಟ್ಟುವ ಯೋಜನೆಯಲ್ಲಿರುವ ಕೊಚ್‌ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್‌ ಕೊಹ್ಲಿ ಪ್ರತಿಯೊಂದು ಪಂದ್ಯದಲ್ಲಿ ಹೆಚ್ಚಿನ ಗಮನ ಹರಿಸಿದ್ದಾರೆ. ಭಾನುವಾರ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Leave a Comment