ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಕೃತಜ್ಞತೆ ಸಲ್ಲಿಸಿದ ಶಮಿ

ನವದೆಹಲಿ, ಏ 16- ಮುಂಬರುವ ಐಸಿಸಿ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿ ಮತ್ತೊಮ್ಮೆ ನನ್ನ ಆತ್ಮವಿಶ್ವಾಸವನ್ನು ಮರುಶೋಧನೆಗೆ ಅವಕಾಶ ಕಲ್ಪಿಸಿರುವ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಹಿರಿಯ ವೇಗಿ ಮೊಹಮ್ಮದ್ ಶಮಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕಳೆದ 2015ರ ಐಸಿಸಿ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿ 17 ವಿಕೆಟ್ ಪಡೆಯುವ  ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿದ್ದರು. ನಂತರ ಅವರು ತಮ್ಮ ದೇಹದ ತೂಕ ಹೆಚ್ಚಾದ ಹಿನ್ನೆಲೆಯಲ್ಲಿ ಎರಡು ವರ್ಷ ಏಕದಿನ ಮಾದರಿಯಲ್ಲಿ ಆಡಿರಲಿಲ್ಲ. ಜಸ್ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರಿಗೆ ಮೊರೆ ಹೋಗಲಾಗಿತ್ತು. ಆದರೆ, ಮೊಹಮ್ಮದ್ ಶಮಿ ಏಕದಿನ ಮಾದರಿಯಲ್ಲಿ ಯಶಸ್ವಿಯಾಗಿ ಬೌಲಿಂಗ್ ಮಾಡುತ್ತಿದ್ದಾರೆ.

“ಐಸಿಸಿ ವಿಶ್ವಕಪ್ ಎರಡನೇ ಬಾರಿ ಆಡುತ್ತಿರುವುದು ಸಂತಸ ಉಂಟುಮಾಡಿದೆ. 2015ರ ವಿಶ್ವಕಪ್ ಪ್ರದರ್ಶನ ಹಾಗೂ ಕಳೆದ ಎಂಟು ತಿಂಗಳಿಂದ ತಂಡದ ಯಶಸ್ಸಿಗೆ ಹಾಕಿರುವ ಶ್ರಮ ಹಾಗೂ ಸ್ಥಿರ ಪ್ರದರ್ಶನ ಆಧರಿಸಿ ನನ್ನನ್ನು ವಿಶ್ವಕಪ್ ಭಾರತ ತಂಡಕ್ಕೆ ಪರಿಗಣಿಸಿರುವುದು ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ತಂಡದ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ” ಎಂದು ಶಮಿ ಹೇಳಿದರು.

“2015ರ ವಿಶ್ವಕಪ್ ಬಳಿಕ ಗಾಯಗೊಂಡಿದ್ದ ನನಗೆ ದೇಹದ ತೂಕ ಹೆಚ್ಚಾಗಿತ್ತು. ಇದರಿಂದಾಗಿ ಸುದೀರ್ಘ ಅವಧಿಯಲ್ಲಿ ಏಕದಿನ ಸರಣಿಯಿಂದ ದೂರ ಉಳಿದಿದ್ದೆ. ಆದರೆ, ಕಳೆದ 6 ತಿಂಗಳಲ್ಲಿ ಏಕದಿನ ಮಾದರಿಗೆ ಮರಳಿದ್ದು, ಅಂದುಕೊಂಡಂತೆ ಉತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದೆ. ಅದೇ ಲಯವನ್ನು ಮುಂದುವರಿಸಿದ್ದರಿಂದ ಕಳೆದ ಸರಣಿಗಳಲ್ಲಿ ಉತ್ತಮ ಬೌಲಿಂಗ್ ಮಾಡಲು ಸಾಧ್ಯವಾಯಿತು. ವಿಶ್ವಕಪ್ ಟೂರ್ನಿಯಲ್ಲೂ ಅದೇ ಲಯ ಮುಂದುವರಿಸುವ ಕಡೆ ಗಮನ ಹರಿಸುತ್ತೇನೆ ” ಎಂದರು.

ಇಂಗ್ಲೆಂಡ್‌ನಲ್ಲಿ ಮೇ 30 ರಿಂದ ಜುಲೈ 14ರವರೆಗೆ ವಿಶ್ವಕಪ್ ಪಂದ್ಯಾವಳಿ ನಡೆಯಲಿದೆ. ಭಾರತ ತಂಡ ಜೂನ್ 5 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವಾಡಲಿದೆ. ಇದಕ್ಕೂ ಮುನ್ನ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶದ ವಿರುದ್ಧ ಅಭ್ಯಾಸ ಪಂದ್ಯವಾಡಲಿದೆ.

 

Leave a Comment