ಟಿ-20: ಕ್ಲೀನ್ ಸ್ವೀಪ್ ನತ್ತ ಭಾರತ ವನಿತೆಯರ ಚಿತ್ತ

ನವದೆಹಲಿ, ನ. – ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ವನಿತೆಯರ ತಂಡ, ಐದನೇ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ವಿಂಡೀಸ್ ತಂಡದ ಸವಾಲನ್ನು ಎದುರಿಸಲಿದ್ದು, ಕ್ಲೀನ್ ಸ್ವೀಪ್ ಸಾಧನೆಯತ್ತ ಚಿತ್ತ ನೆಟ್ಟಿದೆ.

ಆಡಿರುವ ನಾಲ್ಕೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಮನಮೋಹಕ ಪ್ರದರ್ಶನ ನೀಡಿದೆ. ಭಾರತ ತಂಡದ ಸ್ಟಾರ್ ಆಟಗಾರ್ತಿಯರು ಉತ್ತಮ ಪ್ರದರ್ಶನ ನೀಡಿದ್ದಾರೆ. ಶಫಾಲಿ ವರ್ಮಾ ಆಡಿದ ನಾಲ್ಕು ಪಂದ್ಯಗಳಲ್ಲಿ 149 ರನ್ ಕಲೆ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ರನ್ ಗಳನ್ನು ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಅಗ್ರ ಮೂರು ಸ್ಥಾನವನ್ನು ಭಾರತೀಯ ಆಟಗಾರ್ತಿಯರು ಹೊಂದಿದ್ದಾರೆ.

ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಸರಣಿಯಲ್ಲಿ 100 ರನ್ ಬಾರಿಸಿದ್ದು ವಿಶ್ವಾಸದಲ್ಲಿದ್ದಾರೆ. ಜೆಮಿಮಾ ರೋಡ್ರಿಗಸ್ ಸಹ ತಮ್ಮ ಜವಾಬ್ದಾರಿಯನ್ನು ಅರಿತು ಆಡಬೇಕಿದೆ. ಹರ್ಮನ್ ಪ್ರೀತ್ ಕೌರ್, ವೇದಾ ಕೃಷ್ಣ ಮೂರ್ತಿ ರನ್ ವೇಗಕ್ಕೆ ಚುರುಕು ಮಟ್ಟಿಸಬೇಕಿದೆ.

ಎದುರಾಳಿ ಬ್ಯಾಟ್ಸ್ ಮನ್ ಗಳನ್ನು ಬಹುವಾಗಿ ಕಾಡಿದ್ದ ಭಾರತದ ಸ್ಟಾರ್ ಬೌಲರ್ ಗಳು ಮತ್ತೊಮ್ಮೆ ಬಿಗುವಿನ ದಾಳಿ ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ. ದೀಪ್ತಿ ಶರ್ಮಾ (8), ರಾಧಾ ಯಾದವ್ (5) ವಿಕೆಟ್ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಉಳಿದ ಬೌಲರ್ ಗಳು ಶಿಸ್ತು ಬದ್ಧ ದಾಳಿ ನಡೆಸಲು ಯೋಜನೆ ರೂಪಿಸಿಕೊಂಡಿದ್ದಾರೆ.

ಕೊನೆಯ ಪಂದ್ಯದಲ್ಲಿ ಗೆಲುವಿನ ಕೇಕೆ ಹಾಕಿ, ಭಾರತಕ್ಕೆ ಶಾಕ್ ನೀಡಲು ವಿಂಡೀಸ್ ವನಿತೆಯರು ತಯಾರಿ ನಡೆಸಿದ್ದಾರೆ.

Leave a Comment