ಟಿ.೨೦- ವಿಂಡೀಸ್ ವಿರುದ್ಧ ಭಾರತದ ವನಿತೆಯರಿಗೆ ಜಯ ಕನ್ನಡತಿ ವೇದಾ ಭರ್ಜರಿ ಬ್ಯಾಟಿಂಗ್

ನವದೆಹಲಿ, ನ.೨೧ – ವೆಸ್ಟ್‌ವಿಂಡಿಸ್ ವಿರುದ್ಧ ನಡೆದ ಐದನೇ ಟಿ-೨೦ ಕ್ರಿಕೆಟ್ ಪಂದ್ಯದಲ್ಲಿ ೬೧ ರನ್ ಗಳಿಂದ ಭರ್ಜರಿ ಜಯ ಸಾಧಿಸಿದ ಮಹಿಳಾ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

ಟೀಂ ಇಂಡಿಯಾದ ಭರವಸೆಯ ಆಟಗಾರ್ತಿ ಜೆಮಿಮಾ ರೊಡ್ರಿಗಸ್ (೫೦) ಹಾಗೂ ಕನ್ನಡತಿ ವೇದಾ ಕೃಷ್ಣಮೂರ್ತಿ (ಅಜೇಯ ೫೭) ಅವರ ಭರ್ಜರಿ ಆಟದ ನೆರವಿನಿಂದ ತಂಡ ವೆಸ್ಟ್ ವಿಂಡೀಸ್ ಪ್ರವಾಸದಲ್ಲಿ ಆತಿಥೇಯ ತಂಡವನ್ನು ಐದನೇ ಟಿ-೨೦ ಕ್ರಿಕೆಟ್ ಪಂದ್ಯದಲ್ಲಿ ೬೧ ರನ್ ಗಳಿಂದ ಮಣಿಸಿ, ಕ್ಲೀನ್ ಸ್ವೀಪ್ ಮಾಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ತಂಡ ೨೦ ಓವರ್ ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೩೪ ರನ್ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಬ್ಯಾಟ್ ಮಾಡಿದ ವೆಸ್ಟ್‌ವಿಂಡೀಸ್ ತಂಡ ೨೦ ಓವರ್ ಗಳಲ್ಲಿ ೭ ವಿಕೆಟ್ ಗೆ ೭೩ ರನ್ ಸೇರಿಸಿತು.

ಭಾರತ ತಂಡದ ಆರಂಭಿಕರು ಬೇಗನೆ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ಹಾಗೂ ವೇದಾ ಮೂರನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಪ್ರದರ್ಶನ ನೀಡಿದರು. ೩.೧ ಓವರ್ ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತ ೧೯.೫ ಓವರ್ ಗಳ ವರೆಗೂ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು. ಜೆಮಿಮಾ ಹಾಗೂ ವೇದಾ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಯಿತು. ಜೆಮಿಮಾ ೫೬ ಎಸೆತಗಳಲ್ಲಿ ೩ ಬೌಂಡರಿ ನೆರವಿನಿಂದ ೫೦ ರನ್ ಬಾರಿಸಿದರು. ಕನ್ನಡತಿ ಸ್ಟಾರ್ ಆಟಗಾರ್ತಿ ೪೮ ಎಸೆತಗಳಲ್ಲಿ ೪ ಬೌಂಡರಿ ಸಹಾಯದಿಂದ ಅಜೇಯ ೫೭ ರನ್ ಸಿಡಿಸಿದರು.

ಗುರಿಯನ್ನು ಹಿಂಬಾಲಿಸಿದ ವಿಂಡೀಸ್ ತಂಡದ ಬ್ಯಾಟ್ಸ್‌ಮನ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆತಿಥೇಯ ತಂಡದ ಪರ ಕಿಶೋನಾ ನೈಟ್ (೨೨), ಶೆಮೈನ್ ಕ್ಯಾಂಪ್ಬೆಲ್ಲೆ (೧೯) ತಂಡಕ್ಕೆ ಕೊಂಚ ಆಸರೆಯಾದರು. ಉಳಿದ ಆಟಗಾರರು ರನ್ ಬರ ಅನುಭವಿಸಿದರು. ಭಾರತದ ಪರ ಅಂಜು ಪಾಟೀಲ್ ೨, ರಾಧಾ ಯಾದವ್, ಪೂನಮ್ ಯಾದವ್, ಪೂಜಾ, ಹರ್ಲಿನ್ ತಲಾ ಒಂದು ವಿಕೆಟ್ ಕಬಳಿಸಿದರು.

ಸ್ಕೋರ್ ವಿವರ
ಟೀಂ ಇಂಡಿಯಾ ೧೩೪/೩,(೨೦ ಓವರ್ ಗೆ) ರೊಡ್ರಿಗಸ್ ೫೦, ವೇದಾ ಕೃಷ್ಣಮೂರ್ತಿ ೫೭ ಅಜೇಯ, (ಮ್ಯೂಥ್ಯೂ ೧/೨೩)

ವೆಸ್ಟ್ ಇಂಡೀಸ್ ೭೩/೭(೨೦ ಓವರ್‌ಗೆ) ನೈಟ್ ೨೨,( ಅಂಜು ಪಾಟೀಲ್ ೨/೩)

Leave a Comment