ಟಿ.ಬಿ.ಡ್ಯಾಂನಿಂದ ಕಾಲುವೆಗಳಿಗೆ, ನದಿಗೆ ನೀರು ಬಿಡಲು ರೈತ ಮೋರ್ಚಾ ಒತ್ತಾಯ

ಬಳ್ಳಾರಿ, ಆ.10: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ಹಾಗೂ ನದಿಗೆ ತಕ್ಷಣ ನೀರು ಬಿಡಬೇಕೆಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಎಸ್.ಗುರುಲಿಂಗನಗೌಡರು ಒತ್ತಾಯಿಸಿದ್ದಾರೆ.

ರಾಜ್ಯದ ನೀರಾವರಿ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರು ಆದ ಬಸವರಾಜರಾಯರೆಡ್ಡಿಯವರಿಗೆ ಸವಿವರವಾದ ಮನವಿ ಪತ್ರಗಳನ್ನು ಕಳುಹಿಸಿ ಕೊಟ್ಟಿರುವ ಬಿಜೆಪಿಯ ಹಿರಿಯ ಧುರೀಣರು ಆದ ಎಸ್.ಗುರುಲಿಂಗನಗೌಡರು, ಈಗಾಗಲೇ ಭತ್ತದ ನಾಟಿ ಕೆಲಸ ಪ್ರಾರಂಭವಾಗಬೇಕಿತ್ತು. ಆದರೆ ಜಲಾಶಯದಿಂದ ಕಾಲುವೆಗಳಿಗೆ ನೀರು ಪೂರೈಕೆಯಲ್ಲಿ ವಿಳಂಬವಾಗಿರುವುದರಿಂದ ರೈತರು ಸಕಾಲದಲ್ಲಿ ಭತ್ತ ಬೆಳೆಯಲು ವಿಳಂಬವಾಗುತ್ತಿದೆ ಹಾಗೂ ಭತ್ತದ ನಾಟಿ ಮಾಡುವುದು ವಿಳಂಬವಾದರೆ, ಭಾರೀ ಕುಂಟಿತವಾಗುತ್ತದೆ. ಅಲ್ಲದೆ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಅಭಾವದಿಂದ ಕೃಷಿಯೇತರ ಚಟುವಟಿಕೆಗಳು ಕುಂಟಿತವಾಗಿವೆ ಎಂದು ಹೇಳಿರುವ ಅವರು, ಕಳೆದ ವರ್ಷ ಆಗಸ್ಟ್ 8ರಂದು ಟಿ.ಬಿ.ಡ್ಯಾಂನಲ್ಲಿ 40 ಟಿಎಂಸಿ ನೀರು ಸಂಗ್ರಹವಾಗಿದ್ದರೆ, ಪ್ರಸ್ತುತ 44 ಟಿಎಂಸಿ ನೀರು ಸಂಗ್ರಹವಾಗಿದೆ, ಕಳೆದ ವರ್ಷ ಇದೇ ಸಮಯಕ್ಕೆ ಕಾಲುವೆಗಳಿಗೆ ನೀರನ್ನು ಹರಿಸಲಾಗಿತ್ತು. ಆದರೆ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಈ ಸಮಯದಲ್ಲಿ 4 ಟಿಎಂಸಿ ನೀರು ಸಂಗ್ರಹವಾಗಿದ್ದರೂ ಕಾಲುವೆಗಳಿಗೆ ನೀರು ಹರಿಸುವ ಕುರಿತಂತೆ ಐ.ಸಿ.ಸಿ ಸಭೆ ಇಲ್ಲಿಯವರೆಗೆ ಕರೆಯದಿರುವುದು ವಿಷಾದಕರವಾದ ಸಂಗತಿಯಾಗಿದೆ ಎಂದು ಹೇಳಿರುವ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಆದ ಎಸ್.ಗುರುಲಿಂಗನಗೌಡರು ಟಿ.ಬಿ.ಡ್ಯಾಂನ ಆಯಕಟ್ಟು ಪ್ರದೇಶದ ಕೃಷಿ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವ ಕಾಟನ್ ಇಂಡಸ್ಟ್ರೀಸ್, ರೈಸ್ ಮಿಲ್ ಗಳು ಸಂಪೂರ್ಣವಾಗಿ ಮುಚ್ಚಿ ಹೋಗುವ ಹಂತದಲ್ಲಿರುತ್ತವೆ, ಸದರಿ ಕಾರ್ಖಾನೆಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರೆಲ್ಲ ಕೆಲಸವಿಲ್ಲದೆ ಗೂಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ದರಿಂದ ರಾಜ್ಯ ಸರ್ಕಾರವು ತಕ್ಷಣ ಟಿ.ಬಿ.ಡ್ಯಾಂನ ನೀರಾವರಿ ಸಲಹಾ ಸಮಿತಿಯ (ಐಸಿಸಿ) ಸಭೆಯನ್ನು ಕರೆದು ಕಾಲುವೆಗಳಿಗೆ ಹಾಗೂ ತುಂಗಭದ್ರಾ ನದಿಯ ಎರಡು ದಂಡೆಗಳಲ್ಲಿ ನೂರಾರು ಗ್ರಾಮಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಸಂಖ್ಯೆಯ ಜನರ ಹಾಗೂ ಜಾನುವಾರುಗಳಿಗೆ ಕುಡಿಯುವ ಸಲುವಾಗಿ ನದಿಗೆ ನೀರನ್ನು ಹರಿಸಬೇಕೆಂದು ಎಸ್.ಗುರುಲಿಂಗನಗೌಡರು ಒತ್ತಾಯಿಸಿದ್ದಾರೆ.

 

Leave a Comment