ಟಿಬೆಟಿಯನ್ನರಿಗೆ ನೆರವು ಸಿಎಂ ಭರವಸೆ

ಬೆಂಗಳೂರು, ಆ. ೧೧- ರಾಜ್ಯದಲ್ಲಿ ನೆಲೆಸಿರುವ ಟಿಬೆಟಿಯನ್ನರಿಗೆ ಸರ್ಕಾರದಿಂದ ಅಗತ್ಯವಾದ ಎಲ್ಲ ನೆರವು ಹಾಗೂ ಸೌಲಭ್ಯಗಳನ್ನು ಒದಗಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಟಿಬೆಟಿಯನ್ ಸಮುದಾಯ ನಗರದಲ್ಲಿಂದು ಏರ್ಪಡಿಸಿದ್ದ ಧನ್ಯವಾದ ಕರ್ನಾಟಕ ಕಾರ್ಯಕ್ರಮದಲ್ಲಿ ಬೌದ್ಧ ಧರ್ಮ ಗುರು ದಲೈಲಾಮಾ ಅವರಿಂದ ಗೌರವ, ಆಶೀರ್ವಾದ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಟಿಬೆಟಿಯನ್‌ರ ಜತೆಗಿನ ಕನ್ನಡಿಗರ ಸೌಹಾರ್ದತೆ, ಬಾಂಧವ್ಯ ಹೀಗೆ ಮುಂದುವರೆಯಬೇಕು. ರಾಜ್ಯದಲ್ಲಿರುವ ಟಿಬೆಟಿಯನ್‌ರು ಕನ್ನಡಿಗರಲ್ಲಿ ಒಂದಾಗಿ ಬದುಕುತ್ತಿದ್ದಾರೆ ಎಂದರು.
ಟಿಬೆಟಿಯನ್‌ರಿಗೆ 60 ವರ್ಷಗಳ ಹಿಂದೆ ರಾಜ್ಯದಲ್ಲಿ ಆಶ್ರಯ ನೀಡುವ ಬಗ್ಗೆ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು ಒಂದು ಕ್ಷಣ ತಡ ಮಾಡದೆ ತೀರ್ಮಾನ ಕೈಗೊಂಡರು. ಅದರಂತೆ ಟಿಬೆಟ್ ನಿರಾಶ್ರಿತರು ರಾಜ್ಯದ ಮೈಸೂರು, ಉತ್ತರ ಕನ್ನಡ ಹಾಗೂ ಚಾಮರಾಜನಗರಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಂದಿನಿಂದಲೂ ಅವರು ನಮ್ಮವರಲ್ಲಿ ಒಬ್ಬರಾಗಿ ಜೀವನ ನಡೆಸಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದ ಅಭಿವೃದ್ಧಿಗೂ ಟಿಬೆಟಿಯನ್‌ರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಟಿಬೆಟಿಯನ್‌ರ ಜತೆಗಿನ ಬಾಂಧವ್ಯ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಟಿಬೆಟಿಯನ್‌ರು ತಮ್ಮದೇ ಆದ ಸಂಸ್ಕೃತಿ, ಪರಂಪರೆ ಹಾಗೂ ಆಚರಣೆಗಳಿಗೆ ಹೆಸರಾದವರು. ಭಾರತದೊಂದಿಗೆ ಟಿಬೆಟ್‌ನ ಸಂಬಂಧ ಉತ್ತಮವಾಗಿದೆ. ಭಾರತೀಯರು ಹಾಗೂ ಟಿಬೆಟಿಯನ್‌ರು ಪರಸ್ಪರ ಒಂದಾಗಿ ಬದುಕುತ್ತಿದ್ದಾರೆ ಎಂದು ಅವರು ಹೇಳಿದರು.
ರಾಜ್ಯದಲ್ಲಿರುವ ಟಿಬೆಟಿಯನ್‌ರಿಗೆ ಸರ್ಕಾರ ಎಲ್ಲ ಸೌಕರ್ಯ, ಸೌಲಭ್ಯ ಒದಗಿಸಿದೆ. ಅಗತ್ಯವೆನಿಸಿದರೆ ಮತ್ತಷ್ಟು ಸೌಲಭ್ಯ ಒದಗಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಇದೇ ಸಂದರ್ಭದಲ್ಲಿ ಪಿರಿಯಾಪಟ್ಟಣದ ಶಾಸಕ ಮಹದೇವ್, ಹುಣಸೂರಿನ ಶಾಸಕ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಟಿಬೆಟ್ ಬೌದ್ಧಗುರು ದಲೈಲಾಮಾ ಸೇರಿದಂತೆ ಟಿಬೆಟಿಯನ್ ಸಮುದಾಯದ ಪ್ರಮುಖ ನಾಯಕರುಗಳು ಉಪಸ್ಥಿತರಿದ್ದರು.

Leave a Comment