ಟಿಪ್ಪು ಸುಲ್ತಾನ್ ಮುಖ್ಯ ರಸ್ತೆ ಬಳಿ ಭೂ ಕುಸಿತ

ರಾಯಚೂರು.ಜೂ.19- ಜಿಲ್ಲಾಡಳಿತ ಮತ್ತು ನಗರಸಭೆಯ ಕೂಗೆಳೆತೆಯಲ್ಲಿರುವ ಟಿಪ್ಪು ಸುಲ್ತಾನ್ ಮುಖ್ಯ ರಸ್ತೆಯ ಸೇತುವೆ ಬಳಿ ಇಂದು ಮುಂಜಾನೆ ಭಾರೀ ಗಾತ್ರದಲ್ಲಿ ಭೂಮಿ ಕುಸಿದಿದೆ. ಕಳೆದ ಮೂರು ದಿನಗಳ ಸತತ ಮಳೆಗೆ ಐತಿಹಾಸಿಕ ಕೋಟೆ ಪಕ್ಕದ ನೆಲ ಕುಸಿದಿದೆ. ಟಿಪ್ಪು ಸುಲ್ತಾನ್ ಮುಖ್ಯ ರಸ್ತೆಯಿಂದ ಮೂರ್ನಾಲ್ಕು ಅಡಿಗಳ ಅಂತರದಲ್ಲಿ ನೆಲ ಕುಸಿದಿರುವುದು ಆತಂಕ ಮೂಡುವಂತೆ ಮಾಡಿದೆ. ಕಳೆದ ಕೆಲ ದಿನಗಳಿಂದ ಈ ಸ್ಥಳದಲ್ಲಿ ಸಣ್ಣ ಪ್ರಮಾಣದ ತೆಗ್ಗು ಕಂಡು ಬಂದಿತ್ತು. ಇದನ್ನು ದುರಸ್ತಿ ಮಾಡುವಂತೆ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮಹ್ಮದ್ ಅಬ್ದುಲ್ ಹೈ ಫಿರೋಜ್ ನಗರಸಭೆಗೆ ಒತ್ತಾಯಿಸಿದರು.

ಆದರೆ, ನಗರಸಭೆ ಅಧಿಕಾರಿಗಳು ಇತ್ತ ಗಮನ ಹರಿಸದ ಪರಿಣಾಮ ಮುಖ್ಯ ರಸ್ತೆಯ ಪಕ್ಕ ಭಾರೀ ಭೂ ಕುಸಿತಕ್ಕೆ ಕಾರಣವಾಗಿದೆ. ಈ ಪ್ರದೇಶದಲ್ಲಿ ಭೂಮಿ ಭಾರೀ ಪ್ರಮಾಣದಲ್ಲಿ ಸಡಿಲಗೊಂಡು ಯಾವುದೇ ಕ್ಷಣದಲ್ಲಿ ಮತ್ತಷ್ಟು ಭೂಮಿ ಕುಸಿತದ ಸಾಧ್ಯತೆಯ ಆತಂಕ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ಲಾರಿ ಇನ್ನಿತರ ಭಾರೀ ವಾಹನಗಳು ಸಂಚರಿಸಿದರೆ, ಅನಾಹುತಕ್ಕೆ ಆಹ್ವಾನ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಕ್ಕದಲ್ಲಿ ಭಾರೀ ಗಾತ್ರದ ಕಲ್ಲಿನ ಕೋಟೆ ಇರುವುದರಿಂದ ಸ್ಥಳೀಯರನ್ನು ಈ ಭೂ ಕುಸಿತ ಭಯ ಭೀತಗೊಳ್ಳುವಂತೆ ಮಾಡಿದೆ. ತಕ್ಷಣವೇ ಈ ಭೂ ಕುಸಿತ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದರೆ, ಈ ಹಿಂದೆ ಗುಬ್ಬೇರ ಬೆಟ್ಟ ಕುಸಿತದ ಪ್ರಕರಣದ ಮತ್ತೊಂದು ದುರ್ಘಟನೆ ಸಂಭವಿಸುವುದಕ್ಕೆ ಅಧಿಕಾರಿಗಳು ಹೊಣೆಯಾಗಲಿದ್ದಾರೆ.

Leave a Comment