ಟಿಪ್ಪು ಜಯಂತಿ ಸಿಎಂ ದ್ವಂದ್ವ ನಿಲುವು : ಈಶ್ವರಪ್ಪ ಟೀಕೆ

ಬಾಗಲಕೋಟೆ, ನ. ೯- ಟಿಪ್ಪು ಜಯಂತಿ ಆಚರಣೆ ವಿಚಾರದ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅನುಸರಿಸುತ್ತಿರುವ ಧೋರಣೆಯನ್ನು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಕಟುವಾಗಿ ಟೀಕಿಸಿದ್ದಾರೆ.

ತಾಲ್ಲೂಕಿನ ಕಳಸಕೊಪ್ಪ ಗ್ರಾಮದ ಕೆರೆಗೆ ಬಾಗಿನ ಅರ್ಪಿಸಿದ ನಂತರ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಕೊಡಗಿನಲ್ಲಿ ಟಿಪ್ಪು ಜಯಂತಿ ವಿರುದ್ಧ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದ ಕುಮಾರಸ್ವಾಮಿ ಮುಂದೇನಾದರೂ ತಾವು ಮುಖ್ಯಮಂತ್ರಿಯಾದರೆ ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಈಗ ಅವರು ಜಯಂತಿ ಪರವಾಗಿದ್ದಾರೆ. ಈ ಮೂಲಕ ಅವರಲ್ಲಿ ಸ್ಪಷ್ಟ ನಿಲುವು ಇಲ್ಲ ಎಂಬುದು ತಿಳಿಯುತ್ತಿದೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಅವರಿಗೆ ಸ್ಪಷ್ಟವಾದ ನಿಲುವೇ ಇಲ್ಲ, ಇನ್ನು ದ್ವಂದ್ವದ ಮಾತಿನ ಪ್ರಶ್ನೆಯೇ ಇಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾಡಿನ ಜನರ ಅದೃಷ್ಟವೋ ದುರಾದೃಷ್ಟವೋ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಿದ್ದಾರೆ ಎಂದು ಲೇವಡಿ ಮಾಡಿದರು. ನಮ್ಮಲ್ಲಿ ಟಿಪ್ಪು ರಕ್ತ ಹರಿಯುತ್ತಿಲ್ಲ, ಸ್ವಾತಂತ್ರ್ಯ ಯೋಧರ ರಕ್ತ ಹರಿಯುತ್ತಿದೆ. ಟಿಪ್ಪು ಜಯಂತಿ ಮಾಡಿ ಎಂದು ಯಾರೂ ಹೇಳಿಲ್ಲ. ಆದರೂ ಆಚರಣೆ ಮಾಡಲಾಗುತ್ತಿದೆ. ಇದನ್ನು ವಿರೋಧಿಸಿ ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿದೆ ಎಂದರು.

ತಾವು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಮಹದಾಯಿ ಯೋಜನೆಗೆ ಚಾಲನೆ ನೀಡಲಾಗಿತ್ತು. ನ್ಯಾಯಾಧೀಕರಣದ ತೀರ್ಪು ಹೊರ ಬಂದು ನೀರು ಬಳಕೆಗೆ ಅವಕಾಶವಿದ್ದರೂ ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಈ ಕುರಿತು ಹೋರಾಟ ಮಾಡುತ್ತೇವೆ ಎಂದರು.

ಶಾಸಕ ಮುರುಗೇಶ್ ನಿರಾಣಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment