ಟಿಪ್ಪು ಜಯಂತಿಗೆ ವಿರೋಧ: ಅಡ್ಡಿ ಎಚ್ಚರಿಕೆ

ತುಮಕೂರು, ನ. ೯- ಹಿಂದೂ ವಿರೋಧಿಯಾಗಿರುವ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ, ಜಿಲ್ಲಾಡಳಿತದಿಂದ ನಡೆಯುವ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಪಡಿಸುವುದಾಗಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ದಕ್ಷಿಣ ಪ್ರಾಂತ ಸಂಚಾಲಕ ಬಸವರಾಜು ತಿಳಿಸಿದರು.

ನಗರದ ರಾಮಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಸುಲ್ತಾನ್ ಮತಾಂಧ, ಧರ್ಮ ವಿರೋಧಿ, ಕನ್ನಡ ವಿರೋಧಿ ಎಂಬ ಮಾಹಿತಿಯನ್ನು ಸರ್ಕಾರವೇ ಮಂಗಳೂರು ದರ್ಶನ ಮಾಹಿತಿ ಪುಸ್ತಕದಲ್ಲಿ ಪ್ರಕಟಿಸಿದೆ. ಆದರೂ ಆತನನ್ನು ಸರ್ವಧರ್ಮ ಸಮನ್ವಯಕಾರ ಎಂಬಂತೆ ಬಿಂಬಿಸಲು ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

ಮುಸ್ಲಿಂನಲ್ಲಿ ವ್ಯಕ್ತಿ ಆಚರಣೆ ಧರ್ಮ ವಿರೋಧವಾದದ್ದು. ಆದರೆ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವ ಮೂಲಕ ಇಸ್ಲಾಂ ವಿರೋಧಿಯಾಗಿದೆ. ಟಿಪ್ಪು ಜಯಂತಿ ಬಗ್ಗೆ ಪರ-ವಿರೋಧಕ್ಕೆ ಆಸ್ಪದವಿಲ್ಲ ಎಂದು ಉಪಮುಖ್ಯಮಂತ್ರಿ ಪರಮೇಶ್ವರ್ ಹೇಳುತ್ತಿದ್ದಾರೆ. ಇದು ಸಂವಿಧಾನ ವಿರೋಧಿಯಾಗಿದೆ. ಪ್ರಜಾಪ್ರಭುತ್ವ ವಿರೋಧಿಯಾಗಿ ಬೆದರಿಕೆ ತಂತ್ರವನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಜಯಂತಿಯಾದರೂ ಸಾರ್ವಜನಿಕವಾಗದ ಮೇಲೆ ಜನರ ದುಡ್ಡು ವ್ಯಯಿಸಿ ಆಚರಣೆ ಮಾಡುವುದಾದರೂ ಏಕೆ. ಟಿಪ್ಪು ಜಯಂತಿ ಆಚರಿಸುವುದಕ್ಕೆ ಕೆಲ ಮುಸ್ಲಿಂರು ವಿರೋಧ ವ್ಯಕ್ತಪಡಿಸುತ್ತಾರೆ. ಟಿಪ್ಪು ಜಯಂತಿಯನ್ನು ಎಷ್ಟು ಮಸೀದಿಗಳಲ್ಲಿ ಆಚರಿಸಿದ್ದಾರೆ ಎನ್ನುವುದನ್ನು ಸರ್ಕಾರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದ ಅವರು, ಟಿಪ್ಪು ಕ್ರೈಸ್ತ ವಿರೋಧಿಯಾಗಿದ್ದ ಎನ್ನುವುದಕ್ಕೆ ಬಂಟ್ವಾಳದ ನೆತ್ತರಕೆರೆ ಸಾಕ್ಷಿಯಾಗಿದೆ. ಆದರೂ ಒತ್ತಾಯ ಪೂರ್ವಕವಾಗಿ ಟಿಪ್ಪು ಜಯಂತಿ ಆಚರಣೆಗೆ ಸರ್ಕಾರ ಪಟ್ಟು ಹಿಡಿದಿದೆ ಎಂದರು.

ಟಿಪ್ಪು ವೀರನೂ ಅಲ್ಲ, ಶೂರನೂ ಅಲ್ಲ ಆತ ಒಬ್ಬ ರಣಹೇಡಿ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿದ್ದರೂ ಸರ್ಕಾರ ಅಂತಹ ಅಸಂಸ್ಕೃತ ವ್ಯಕ್ತಿಯ ಆಚರಣೆ ಮಾಡುತ್ತಿರುವುದು ಸರಿಯಲ್ಲ. ಟಿಪ್ಪು ಮುಸ್ಲಿಂ ಎನ್ನುವ ಕಾರಣಕ್ಕೆ ನಾವು ವಿರೋಧ ವ್ಯಕ್ತಪಡಿಸುತ್ತಿಲ್ಲ. ಟಿಪ್ಪು ಜಯಂತಿಯ ಬದಲು ನಜೀರ್‍ಸಾಬ್, ಅಬ್ದುಲ್‍ಕಲಾಂ, ಸಂತಶಿಶುನಾಳ ಷರೀಫರ ಜಯಂತಿಯನ್ನು ಮಾಡಲಿ ನಾವು ಸಹಕಾರ ನೀಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಭಜರಂಗದಳ ಜಿಲ್ಲಾ ಸಂಚಾಲಕ ಹೆಚ್.ಎನ್.ಚಂದ್ರಶೇಖರ್, ನಗರ ಸಂಚಾಲಕ ಜೀವನ್ ಮತ್ತಿತರರು ಉಪಸ್ಥಿತರಿದ್ದರು.

Leave a Comment