ಟಿಪ್ಪರ್ ಮೇಲೆ ಬಂಕರ್  ಕುಸಿದು ಇಬ್ಬರ ಮೃತ್ಯು

ಹೆಬ್ರಿ, ಆ.೧೩- ಶಿವಪುರ ಕಲ್ಮುಂಡ ಬಳಿ ಇರುವ ಮೂಕಾಂಬಿಕಾ ಕ್ರಷರ್ ಘಟಕದಲ್ಲಿ ಜಲ್ಲಿ ತುಂಬಿದ ಬಂಕರ್ ಕುಸಿದು ಟಿಪ್ಪರ್ ಮೇಲೆ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ನಿನ್ನೆ ನಡೆದಿದೆ.
ಘಟನೆಯಲ್ಲಿ ಲಾರಿ ಚಾಲಕ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮೂಳ್ಕೂರು ಮೂಲದ ಪರಶುರಾಮ ಅವರ ಪುತ್ರ ಸಂಜೀವ (೩೦) ಮತ್ತು ಲಾರಿಯಲ್ಲಿ ಜಲ್ಲಿ ಸಮತಟ್ಟು ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಕಾರ್ಮಿಕ ಜಗದೀಶ ಯಾನೆ ಅಜಿತ್ (೨೭) ಮೃತಪಟ್ಟ ದುರ್ದೈವಿಗಳು. ಕಲ್ಮುಂಡ ಕ್ರಷರ್‌ನಲ್ಲಿ ಬಂಕರ್ ಮೂಲಕ ಲಾರಿಗೆ ಜಲ್ಲಿ ತುಂಬಿಸಿ ಹೊರಡುವ ವೇಳೆ ಚಾಲಕ ಲಾರಿಯನ್ನು ರಿವರ್ಸ್ ಮಾಡುವಾಗ ಬಂಕರ್‌ನ ಕಂಬಕ್ಕೆ ಲಾರಿ ಗುದ್ದಿದ ಪರಿಣಾಮ ಜಲ್ಲಿ ಶೇಖರಿಸಿದ್ದ ಇಡೀ ಬಂಕರ್ ಕುಸಿದು ಲಾರಿ ಮೇಲೆ ಬಿದ್ದು ಅವಘಡ ಸಂಭವಿಸಿದೆ. ಘಟನೆಯಲ್ಲಿ ಲಾರಿ ಅಪ್ಪಚ್ಚಿಯಾಗಿ ಅದರಲ್ಲಿದ್ದ ಚಾಲಕ ಹಾಗೂ ಕಾರ್ಮಿಕರ ಶವ ಜಲ್ಲಿ ನಡುವೆ ಹೂತು ಹೋಗಿದ್ದು ಕ್ರೇನ್‌ಗಳನ್ನು ಬಳಸಿ ಮೇಲೆತ್ತಲಾಗಿದೆ. ಕ್ರಷರ್ ಮಾಲಕ ಹಾಗೂ ಮೇಲ್ವಿಚಾರಕನ ಮೇಲೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲಾ ಎಸ್ಪಿ ಡಾ. ಸಂಜೀವ ಪಾಟೀಲ್, ಡಿವೈಎಸ್ಪಿ ಕುಮಾರಸ್ವಾಮಿ, ಕಾರ್ಕಳ ವೃತ್ತ ನಿರೀಕ್ಷಕ ಜಾಯ್ ಆಂಥೋನಿ, ಹೆಬ್ರಿ ಠಾಣಾಧಿಕಾರಿ ಜಗನ್ನಾಥ್ ಟಿ.ಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a Comment