ಟಿಕ್‌ಟಾಕ್ ಗೀಳಿಗೆ ಬಿದ್ದ ಯುವಕನ ಬೆನ್ನುಮೂಳೆ ಮುರಿತ!

ತುಮಕೂರು, ಜೂ. ೧೮- ಸಾಮಾಜಿಕ ಜಾಲತಾಣದಲ್ಲಿ ತನ್ನ ಪ್ರತಿಭೆಯನ್ನು ಹೊರಹಾಕಿದರೆ ಅವಕಾಶ ಸಿಗಬಹುದೆಂಬ ಆಸೆಯಿಂದ ಟಿಕೆ‌ಟಾಕ್ ಗೀಳಿಗೆ ಬಿದ್ದ ಯುವಕನೋರ್ವ ಸ್ಟಂಟ್ ಮಾಡಲು ಹೋಗಿ ತನ್ನ ಸ್ಪೈನಲ್ ಕಾರ್ಡ್ (ಬೆನ್ನಮೂಳೆ) ಮುರಿದು ಸಾವು-ಬದುಕಿನ ನಡುವೆ ಹೋರಾಟ ನಡೆಸುವಂತಾಗಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಗೋಡೆಕೆರೆ ಗ್ರಾಮದ ಕುಮಾರ್ ಎಂಬಾತನೇ ಟಿಕ್‌ಟಾಕ್ ಗೀಳಿಗೆ ಬಿದ್ದು ಸ್ಪೈನಲ್‌ಕಾರ್ಡ್ ಮುರಿದುಕೊಂಡಿರುವ ಯುವಕ.

ಈತ ತನ್ನ ಸ್ನೇಹಿತರ ಜತೆ ಟಿಕ್‌ಟಾಕ್‌ನಲ್ಲಿ ಸಾಹಸ ಮಾಡಲು ಹೋಗಿ ಆಯತಪ್ಪಿ ಬಿದ್ದಿದ್ದಾನೆ. ಆಯತಪ್ಪಿ ಬಿದ್ದ ರಭಸಕ್ಕೆ ಈತನ ಬೆನ್ನು ಮೂಳೆ ಮುರಿದಿದ್ದು, ನಡೆದಾಡಲು ಸಾಧ್ಯವಾಗದೇ ಬೆಂಗಳೂರಿನ ಆಸ್ಪತ್ರೆಯಲ್ಲಿ ಮಲಗಿದ್ದಲ್ಲೇ ದಿನ ದೂಡುವಂತಾಗಿದೆ.

ಬಡತನದಲ್ಲಿ ಬೆಳೆದಿದ್ದ ಕುಮಾರ್ ರಸಮಂಜರಿಗಳಲ್ಲಿ ಹಾಡುವ ಮೂಲಕ ಬಂದ ಹಣದಲ್ಲಿ ಕುಟುಂಬ ನಿರ್ವಹಿಸುತ್ತಿದ್ದು, ತನ್ನ ಕುಟುಂಬಕ್ಕೆ ಆಧಾರವಾಗಿದ್ದ. ‌

ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭೆ ಹೊರಹಾಕಿದರೆ ಅವಕಾಶ ಸಿಗುತ್ತದೆ ಎಂಬ ಆಸೆ ಇದೀಗ ಈತನ ಬದುಕಿಗೆ ಕಂಟಕವಾಗಿದೆ.

ಬೆನ್ನು ಮೂಳೆ ಮುರಿದು ಬೆಂಗಳೂರಿನ ಆಸ್ಪತ್ರೆ ಸೇರಿರುವ ಕುಮಾರ್ ಚಿಕಿತ್ಸೆಗೆ 10 ಲಕ್ಷ ರೂ. ಖರ್ಚಾಗಲಿದ್ದು, ಆರ್ಥಿಕ ನೆರವಿಗಾಗಿ ಈತನ ಪೋಷಕರು ಮೊರೆಯಿಟ್ಟಿದ್ದಾರೆ.

ಯುವ ಸಮುದಾಯ ಸಾಮಾಜಿಕ ಜಾಲತಾಣಗಳ ಮನರಂಜನೆಗೆ ದಾಸರಾಗಿದ್ದು, ಮುಂಜಾಗ್ರತಾ ಕ್ರಮ ಅನುಸರಿದೆ ಹಾಗೂ ಅನುಭವವಿಲ್ಲದೆ ಸ್ಟಂಟ್ ಮಾಡಬಾರದು. ಅಮೂಲ್ಯ ಜೀವನ ವ್ಯರ್ಥವಾಗದಂತೆ ಯುವ ಸಮುದಾಯ ನೋಡಿಕೊಳ್ಳಬೇಕು ಎಂದು ವೈದ್ಯ ಡಾ. ನವೀನ್ ಗೋಡೆಕೆರೆ ಸಲಹೆ ಮಾಡಿದ್ದಾರೆ.

Leave a Comment