ಟಿಕ್‌ಟಾಕ್ ಆಪ್‌ಗೆ ಮೊದಲ ಬಲಿ

ನವದೆಹಲಿ, ಏ ೧೫- ಟಿಕ್‌ಟಾಕ್ ಆಪ್ ನಿಷೇಧಿಸುವಂತೆ ಸುಪ್ರೀಂ ಅಂಗಳದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವ ಬೆನ್ನಲ್ಲೇ ಇದೇ ಟಿಕ್‌ಟಾಕ್ ರಾಷ್ಟ್ರ ರಾಜಧಾನಿಯಲ್ಲಿ ಮೊದಲ ಬಲಿ ಪಡೆದಿದೆ.

ಪಿಸ್ತೂಲ್ ಹಿಡಿದು ಟಿಕ್ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಗುಂಡು ಹಾರಿ ಯುವಕನೊಬ್ಬ ಮೃತಪಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ.

ನಿನ್ನೆ ರಾತ್ರಿ ಸಲ್ಮಾನ್, ಸೋಹಾಲಿ ಹಾಗೂ ಅಮೀರ್ ಎಂಬುವವರು ಇಂಡಿಯಾ ಗೇಟ್ ಬಳಿ ಕಾರು ಚಲಾಯಿಸಿಕೊಂಡು ಹೋಗಿದ್ದರು. ಅಲ್ಲಿಗೆ ಭೇಟಿ ನೀಡಿ ವಾಪಾಸಾಗುವಾಗ ಸೋಹಾಲಿ ಗನ್ ಹೊರತೆಗೆದಿದ್ದ. ಈ ವೇಳೆ ಸಲ್ಮಾನ್ ತಲೆಗೆ ಗುರಿ ಇಟ್ಟು ಸೋಹಾಲಿ ಟಿಕ್ ಟಾಕ್ ವಿಡಿಯೋ ಮಾಡಲು ಮುಂದಾಗಿದ್ದ. ಈ ವೇಳೆ ಅಚಾನಕ್ಕಾಗಿ ಗುಂಡು ಹಾರಿದೆ.

ಇದರಿಂದ ಆತಂಕಕ್ಕೆ ಒಳಗಾದ ಸೋಹಾಲಿ ಹಾಗೂ ಅಮೀರ್ ಸಂಬಂಧಿಗಳ ಮನೆಗೆ ತೆರಳಿದ್ದಾರೆ. ಅಲ್ಲಿ ಬಟ್ಟೆ ಬದಲಾಯಿಸಿಕೊಂಡು ಸಲ್ಮಾನ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಗಲೇ ಸಲ್ಮಾನ್ ಕೊನೆಯುಸಿರೆಳೆದಿದ್ದ.
ಸೋಹಾಲಿ ಹಾಗೂ ಅಮೀರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಇದು ಅಚಾನಕ್ಕಾಗಿ ನಡೆದ ಘಟನೆಯೋ ಅಥವಾ ಸಲ್ಮಾನ್ನನ್ನು ಹತ್ಯೆಗೈಯ್ಯುವ ಉದ್ದೇಶ ಇವರಿಗೆ ಇತ್ತೋ ಎನ್ನುವ ನಿಟ್ಟಿನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಇಬ್ಬರು ಯುವಕರು ಪೊಲೀಸರ ವಶದಲ್ಲಿದ್ದಾರೆ.

Leave a Comment