ಟಿಕೆಟ್ ಹಂಚಿಕೆ: ಖರ್ಗೆ ಬೇಸರ

ಬೆಂಗಳೂರು, ಏ. ೧೬- ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಹಿರಿಯ ನಾಯಕರಲ್ಲಿ ಅಸಮಾಧಾನ ಮೂಡಿದ್ದು, ಕಾಂಗ್ರೆಸ್‌ನ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಹಿರಿಯ ನಾಯಕರು ತಮ್ಮ ಆಪ್ತರಿಗೆ ಟಿಕೆಟ್ ನೀ‌ಡದಿರುವುದಕ್ಕೆ ಬೇಸರಗೊಂಡಿದ್ದಾರೆ.

ಹಲವು ದಶಕಗಳಿಂದ ಪಕ್ಷದಲ್ಲಿ ದುಡಿದಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ಸಿಗದೆ ಇತ್ತೀಚೆಗೆಷ್ಟೇ ಪಕ್ಷ ಸೇರುವವರಿಗೆ ಮಣೆ ಹಾಕಿರುವ ವರಿಷ್ಠರ ತೀರ್ಮಾನ ಖರ್ಗೆಯವರಲ್ಲಿ ಬೇಸರ ತರಿಸಿದಂತೆ ಇದೆ.

ಟಿಕೆಟ್ ಹಂಚಿಕೆಯ ನಂತರ ಅವರ ಪ್ರತಿಕ್ರಿಯೆ ಪಡೆಯಲು ಸದಾಶಿವನಗರದ ಅವರ ನಿವಾಸಕ್ಕೆ ತೆರಳಿದ್ದ ಮಾಧ್ಯಮದವರೊಂದಿಗೆ ಮಾತನಾಡಲು ಖರ್ಗೆ ನಿರಾಕರಿಸಿದರು. ಅವರ ಮುಖ್ಯದಲ್ಲಿ ತನ್ನ ಬೆಂಬಲಿಗರಿಗೆ ಟಿಕೆಟ್ ಸಿಗದ ಬೇಸರ ಎದ್ದು ಕಾಣುತ್ತಿತ್ತು.

ಈ ಚುನಾವಣೆಯಲ್ಲಿ ಖರ್ಗೆಯವರು ತಮ್ಮ ಕಟ್ಟಾ ಬೆಂಬಲಿಗ ಛಲವಾದಿ ನಾರಾಯಣಸ್ವಾಮಿಯವರಿಗೆ ದೇವನಹಳ್ಳಿ ಇಲ್ಲವೇ ಯಲಂಹಕ ಕ್ಷೇತ್ರದಿಂದ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸಿದ್ದರು. ಆದರೆ ಅದರಲ್ಲಿ ಅವರು ಸಫಲರಾಗಲಿಲ್ಲ. ಇದರ ಜೊತೆಗೆ ಪಕ್ಷೇತರ ಶಾಸಕ ಅಶೋಕ್ ಖೇಣಿಯ ಅವರ ಪಕ್ಷ ಸೇರ್ಪಡೆಗೂ ವಿರೋಧ ವ್ಯಕ್ತಪಡಿಸಿದ ಖರ್ಗೆಯವರು ಖೇಣಿಯವರಿಗೆ ಕಲ್ಬುರ್ಗಿ ದಕ್ಷಿಣ ಕ್ಷೇತ್ರದಿಂದ ಟಿಕೆಟ್ ನೀಡುವುದಕ್ಕೆ ಪರಿಶೀಲನಾ ಸಮಿತಿಯಲ್ಲೇ ಅಸಮಾಧಾನ ಹೊರಹಾಕಿ ಅರ್ಧದಲ್ಲೇ ಎದ್ದು ಹೊರನಡೆದಿದ್ದರು.

ಆದರೂ ಖೇಣಿಯವರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿ ಖರ್ಗೆಯವರ ಪರಮಾಪ್ತ ಸ್ನೇಹಿತರಾಗಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್‌ ಅವರ ಅಳಿಯ ಚಂದ್ರಾಸಿಂಗ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇವರಿಗೆ ಟಿಕೆಟ್ ಕೊಡಿಸಲು ಖರ್ಗೆ ಸಾಕಷ್ಟು ಲಾಭಿ ನಡೆಸಿದ್ದರಾದರೂ ಅವರ ಮಾತಿಗೆ ವರಿಷ್ಠರು ಮನ್ನಣೆ ನೀಡಿಲ್ಲ. ಇವೆಲ್ಲವೂ ಖರ್ಗೆಯವರಿಗೆ ಬೇಸರ ತರಿಸಿದೆ ಎನ್ನಲಾಗಿದೆ.

Leave a Comment