ಟಿಎಲ್‌ಬಿಸಿ : ಡಿ.1-ಮಾರ್ಚ್ ಅಂತ್ಯದವರೆಗೆ ನೀರು ಹರಿಕೆ

ರಾಯಚೂರು.ನ.22- ತುಂಗಭದ್ರಾ ಎಡದಂಡೆ ಕಾಲುವೆಗೆ ಡಿ.1 ರಿಂದ ಮಾರ್ಚ್ ಅಂತ್ಯದವರೆಗೆ ಹಂತ ಹಂತವಾಗಿ ನೀರು ಪೂರೈಸಲಾಗುತ್ತದೆಂದು ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರಾದ ಲಕ್ಷ್ಮಣ ಸವದಿ ಅವರು ಹೇಳಿದರು.
ಗುರುವಾರ ಮುನೀರಾಬಾದ್ ಕಾಡಾ ಕಛೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆಂದು ಹೇಳಿದರು.
ತುಂಗಭದ್ರಾ ಎಡದಂಡೆ ಕಾಲುವೆಗೆ ಡಿ.1 ರಿಂದ 31 ರವರೆಗೆ 3800 ಕ್ಯೂಸೆಕ್‌ನಂತೆ ನೀರು ಹರಿಸಲಾಗುತ್ತದೆ. ಈ ಅವಧಿಯಲ್ಲಿ ಡಿ.15ರ ಬಿಳಿಗ್ಗೆ 8 ಗಂಟೆಯಿಂದ 27ರ ಬೆಳಿಗ್ಗೆ 8 ಗಂಟೆವರೆಗೆ ವಡ್ಡರಹಟ್ಟಿ, ಸಿಂಧನೂರು ಮತ್ತು ಸಿರವಾರ ವಿಭಾಗಗಳ ವಿತರಣಾ ಕಾಲುವೆಗಳನ್ನು ಆನ್-ಆಫ್ ಮಾ‌ಡಿ, ಮೈಲ್ 104 ರಲ್ಲಿ ಬರುವ ಸಮತೋಲನಾ ಜಲಾಶಯಕ್ಕೆ ನೀರು ಪೂರೈಸಲಾಗುತ್ತದೆ. ಯರಮರಸ್ ವಿಭಾಗದ ಅಚ್ಚುಕಟ್ಟಿನ ಬೆಳೆ ರಕ್ಷಣೆಗೆ ಹಾಗೂ ರಾಯಚೂರು ನಗರ ಇತರೆ ಗ್ರಾಮಗಳ ಕುಡಿವ ಯೋಜನೆಗಳಿಗೆ ನೀರು ಪೂರೈಸಲಾಗುತ್ತದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಎಡದಂಡೆ ಮತ್ತು ಬಲದಂಡೆಯ ವ್ಯಾಪ್ತಿಯ ಹಿಂಗಾರು ಬೆಳೆಗಳು ಒಣಗದಂತೆ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು. ರೈತರ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿದ್ದರೂ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ನೀರಾವರಿ ಅಧಿಕಾರಿಗಳು ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಭೆಯಲ್ಲಿ ನೀರು ಹಂಚಿಕೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಶಾಸಕ ಬಸವನಗೌಡ ದದ್ದಲ ಎಡದಂಡೆ ಕಾಲುವೆಗೆ ಮುಂಗಾರು ಹಂಗಾಮಿನಲ್ಲಿ 7 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಕೇವಲ 1 ಟಿಎಂಸಿ ನೀರು ಬಿಟ್ಟು ನಮ್ಮ ಭಾಗದ ರೈತರಿಗೆ ಅನ್ಯಾಯ ಮಾಡಲಾಗಿದೆಂದು ಹೇಳಿದರು.

Leave a Comment