ಟಿಎಲ್‌ಬಿಸಿ: ಕೊನೆ ಭಾಗಕ್ಕೆ ನೀರು ಹರಿಕೆಗೆ ಆಗ್ರಹಿಸಿ

ಸೆ.12 ಏಳುಮೈಲ್‌ ಕ್ರಾಸ್‌ಬಳಿ ರಸ್ತೆತಡೆ ಚಳುವಳಿ
ರಾಯಚೂರು.ಸೆ.08- ತುಂಗಭದ್ರಾ ಎಡದಂಡೆ ನಾಲೆಯ 104 ಮೈಲಿನ ಕೊನೆಯ ಭಾಗಕ್ಕೆ ನೀರು ಹರಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿಫಲರಾಗಿರುವುದನ್ನು ಖಂಡಿಸಿ, ಸೆ.12 ರಂದು ಏಳುಮೈಲ್‌ ಕ್ರಾಸ್ ಬಳಿ ರಸ್ತೆ ತಡೆ ಚಳುವಳಿ ನಡೆಸಲಾಗುತ್ತದೆ ಎಂದು ಹೋರಾಟಗಾರರಾದ ಸಿದ್ದನಗೌಡ ತಿಳಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡಿ, ತುಂಗಭದ್ರಾ ಎಡದಂಡೆ ನಾಲೆಯ ಕೊನೆ ಭಾಗಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಕಳೆದ 52 ದಿನಗಳಿಂದ ಅವಿರಥ ಹೋರಾಟ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವರಿ ಸಚಿವರು ಹಾಗೂ ಸರಕಾರ ಸ್ಪಂದಿಸದಿರುವುದು ಖಂಡನೀಯ. ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಮಳೆ ಬಾರದಿರುವುದರಿಂದ ರೈತರು ವಿವಿಧ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಸಮರ್ಪಕ ಮಳೆ ಬಾರದಿರುವುದರಿಂದ ಬೆಳೆ ಹಾನಿಯಾಗಿ ರೈತರು ತೀವ್ರ ತೊಂದರೆಗೆ ಗುರಿಯಾಗಿದ್ದಾರೆ.
ಕೊನೆ ಭಾಗಕ್ಕೆ ಇದುವರೆಗೂ ಒಂದು ಹನಿ ನೀರು ಹರಿಸದಿರುವುದು ಸರಿಯಾದ ಕ್ರಮವಲ್ಲ. ಮೇಲ್ಭಾಗದಲ್ಲಿ ನಿರಂತರವಾಗಿ ಅಕ್ರಮ ಪೈಪ್‌ಲೈನ್‌ ಅಳವಡಿಸಿ, ನೀರು ಕಬಳಿಕೆ ತಡೆಯಲು ಜಿಲ್ಲಾ ಉಸ್ತುವಾರಿ ಸಚಿವರು ಡ್ರೋನ್‌ ಮೂಲಕ ಸರ್ವೇ ನಡೆಸುವುದಾಗಿ ಹೇಳಿಕೆ ನೀಡುತ್ತಿರುವುದು ಬಾಲಿಶತನದಿಂದ ಕೂಡಿದ್ದು, ಎಗ್ಗಿಲ್ಲದೇ ನೀರು ಕಬಳಿಸುತ್ತಿರುವುದು ಜಗಜ್ಜಾಹೀರಗೊಂಡಿದ್ದರೂ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದರ ಹಿಂದೆ ಪ್ರಭಾವಿ ರಾಜಕಾರಣಿಗಳ ಕೈಚಳಕ ಅಡಗಿದೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಕುಡಿವ ನೀರು ಹರಿಸಲು ಕಾಲುವೆ ಬಳಿ 144 ನಿಷೇಧಾಜ್ಞೆ ಜಾರಿಗೊಳಿಸುತ್ತಾರೆ. ಆದರೆ, ರೈತರ ಬೆಳೆಗಳಿಗೆ ಮಾತ್ರ ನೀರು ಹರಿಸುವಲ್ಲಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿರುವುದು ಖೇದಕರ ಸಂಗತಿ. 104 ಮೈಲ್‌ನ ಕೊನೆ ಭಾಗದ ರೈತರು ಕಾಲುವೆಗಳಿಗೆ ನೀರು ಹರಿಸುವಂತೆ ನೀರಾವರಿ ಇಲಾಖೆಯ ಮುಖ್ಯ ಇಂಜಿನೀಯರ್ ಅವರಿಗೆ ಹಲವು ಭಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಟಿಎಲ್‌ಬಿಸಿ ವ್ಯಾಪ್ತಿಗೆ ನಾಲ್ವರು ಶಾಸಕರು ಒಳಪಡಲಿದ್ದಾರೆ. ರಸ್ತೆತಡೆ ಚಳುವಳಿಯಲ್ಲಿ ಭಾಗವಹಿಸಿ, ಬೆಂಬಲ ಸೂಚಿಸಬೇಕೆಂದು ಮನವಿ ಮಾಡಿದರು.
ವೆಂಕಟೇಶ್ವರ ರಾವ್, ಆನಂದ ರಾವ್, ಕೆ.ಜಂಬಣ್ಣ ನಿಲೋಗಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment