ಟಿಎಲ್‌ಬಿಸಿ: ಕೊನೆ ಭಾಗಕ್ಕೆ ನೀರು ಹರಿಕೆಗೆ ಆಗ್ರಹಿಸಿ

 ಏಳುಮೈಲ್‌ ಕ್ರಾಸ್‌ಬಳಿ ರಸ್ತೆತಡೆ ಚಳುವಳಿ
* ಸಂಚಾರ ಅಸ್ತವ್ಯಸ್ತ : ಸವಾರರ ಪರದಾಟ
ರಾಯಚೂರು.ಸೆ.12- ತುಂಗಭದ್ರಾ ಎಡದಂಡೆ ನಾಲೆಯ 104 ಮೈಲಿನ ಕೊನೆಯ ಭಾಗಕ್ಕೆ ಸಮರ್ಪಕ ನೀರು ಹರಿಸುವಂತೆ ಆಗ್ರಹಿಸಿ, ರೈತರು ಲಿಂಗಸೂಗೂರು ರಸ್ತೆಯ ಏಳು ಮೈಲ್ ಕ್ರಾಸ್ ಬಳಿ ರಸ್ತೆ ತಡೆ ಚಳುವಳಿ ನ‌ಡೆಸಿರುವುದರಿಂದ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿ, ಸವಾರರು ಪರದಾಡಬೇಕಾಯಿತು.
104 ಮೈಲ್ ಕೊನೆ ಭಾಗಕ್ಕೆ ನೀರು ಹರಿಸುವಂತೆ ಆಗ್ರಹಿಸಿ, ರೈತರು ಸುಮಾರು 2 ಗಂಟೆಗೂ ಅಧಿಕ ಕಾಲ ರಸ್ತೆತಡೆ ನಡೆಸಿರುವುದರಿಂದ ವಾಹನ ಸವಾರರು ದಿಕ್ಕು ತೋಚದೆ ಪರದಾಡಬೇಕಾಯಿತು. ತುಂಗಭದ್ರಾ ಎಡದಂಡೆ ನಾಲೆಯ ಕೊನೆ ಭಾಗಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ಇದುವರೆಗೂ ನೀರು ಹರಿಸದಿರುವುದರಿಂದ ರೈತರು ಬೆಳೆ ಬೆಳೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಮೇಲ್ಭಾಗದ ರೈತರು ಅಕ್ರಮವಾಗಿ ಪೈಪ್ ಲೈನ್ ಅಳವಡಿಸಿ ನೀರು ವ್ಯಾಪಕವಾಗಿ ಕಬಳಿಸುತ್ತಿದ್ದರೂ, ಸರ್ಕಾರ ಮತ್ತು ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಕೊನೆ ಭಾಗಕ್ಕೆ ನೀರು ಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ರೈತರು ಆರೋಪಿಸಿದರು. ತುಂಗಭದ್ರಾ ಎಡದಂಡೆ ನಾಲೆಯ ಕೊನೆ ಭಾಗಕ್ಕೆ ನೀರು ಹರಿಸುವಂತೆ ಆಗ್ರಹಿಸಿ, ರೈತರು ಕಳೆದ 55 ದಿನಗಳಿಂದ ಉಗ್ರ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಸ್ಪಂದಿಸದಿರುವುದು ಖಂಡನೀಯ.
ಜಿಲ್ಲೆಯಾದ್ಯಂತ ಮುಂಗಾರು ಮಳೆ ಬಾರದಿರುವುದರಿಂದ ರೈತರು ವಿವಿಧ ಬೆಳೆ ಬೆಳೆಯಲು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ರೈತರ ಹಿತಾದೃಷ್ಟಿಯಿಂದ ಕೊನೆ ಭಾಗಕ್ಕೆ ನೀರು ಹರಿಸಬೇಕೆಂದು ಆಗ್ರಹಿಸಿದರು.
ಸಿದ್ದನಗೌಡ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ವೆಂಕಟೇಶ್ವರ ರಾವ್, ಆನಂದ ರಾವ್, ಕೆ.ಜಂಬಣ್ಣ ನಿಲೋಗಲ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Comment