ಟಾರ್ಗೆಟ್ ಇಲ್ಯಾಸ್ ಫಿನಿಶ್

ಮಂಗಳೂರಿನಲ್ಲಿ ನಿಲ್ಲದ ರೌಡಿಗಳ ಅಟ್ಟಹಾಸ
ಮಂಗಳೂರು, ಜ.೧೩- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಗಳ ಅಟ್ಟಹಾಸ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಕೆಲ ತಿಂಗಳ ಹಿಂದೆಯಷ್ಟೇ ಫರಂಗಿಪೇಟೆಯಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದ ಆರೋಪಿ, ಟಾರ್ಗೆಟ್ ಗ್ರೂಪ್‌ನ ಮುಖ್ಯಸ್ಥ ಟಾರ್ಗೆಟ್ ಇಲ್ಯಾಸ್ (೩೨)ನನ್ನು ಇಂದು ಬೆಳಗ್ಗೆ ಜೆಪ್ಪಿನಮೊಗರಿನಲ್ಲಿರುವ ಆತನ ಫ್ಲ್ಯಾಟ್‌ಗೆ ನುಗ್ಗಿ ಚೂರಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಇದು ಒಂದೇ ಕೋಮಿನ ನಡುವಿನ ವೈಷಮ್ಯದಿಂದ ನಡೆದ ಪ್ರಕರಣವಾಗಿದ್ದು, ಸಫ್ವಾನ್ ಹಾಗೂ ಉಳ್ಳಾಲದ ದಾವೂದ್ ಗ್ಯಾಂಗ್‌ನಿಂದ ಹತ್ಯೆ ನಡೆದಿದೆ ಎಂದು ಹೇಳಲಾಗಿದೆ.
ಕೊಲೆ, ಕೊಲೆಯತ್ನ, ಅತ್ಯಾಚಾರ, ದರೋಡೆ, ಹನಿಟ್ರ್ಯಾಪ್ ಪ್ರಕರಣ ಸೇರಿದಂತೆ ಸುಮಾರು ೧೮ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇಲ್ಯಾಸ್ ಆರೋಪಿಯಾಗಿದ್ದ. ಅಲ್ಲದೆ ನಿನ್ನೆಯಷ್ಟೇ ಜಾಮೀನು ಪಡೆದು ಜೈಲ್‌ನಿಂದ ಬಿಡುಗಡೆ ಹೊಂದಿದ್ದ. ಇಂದು ಬೆಳಗ್ಗೆ ಈತ ಪತ್ನಿ ಜೊತೆ ಜೆಪ್ಪಿನಮೊಗರುವಿನ ಜುಮಾ ಮಸೀದಿ ಸಮೀಪದ ಇಫ್ತಾ ಗ್ಯಾಲೋರ್ ಎಂಬ ಫ್ಲ್ಯಾಟ್‌ನಲ್ಲಿದ್ದ ಸಂದರ್ಭ ದುಷ್ಕರ್ಮಿಗಳು ಕಾಲಿಂಗ್ ಬೆಲ್ ಹಾಕಿ, ಮನೆಯಿಂದ ಹೊರ ಕರೆದಿದ್ದಾರೆ. ಈ ವೇಳೆ ಬಾಗಿಲು ಓಪನ್ ಮಾಡಿದ ಇಲ್ಯಾಸ್ ಮೇಲೆ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿ, ಚೂರಿಯಿಂದ ಇರಿದು ಪರಾರಿಯಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಇಲ್ಯಾಸ್‌ನನ್ನು ಕೂಡಲೇ ಸಮೀಪದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಯುವ ಕಾಂಗ್ರೆಸ್ ಪದಾಧಿಕಾರಿಯಾಗಿದ್ದ ಇಲ್ಯಾಸ್, ಮಂಗಳೂರು ಉತ್ತರ ಶಾಸಕ ಮೊದಿನ್ ಬಾವಾ, ಸಚಿವ ಯುಟಿ ಖಾದರ್ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ. ಅಲ್ಲದೆ ಇದಕ್ಕೆ ಸಂಬಂಧಿಸಿದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ಉಳ್ಳಾಲದಲ್ಲಿ ಟಾರ್ಗೆಟ್ ಹೆಸರಿನ ಅಂಗಡಿ ಹೊಂದಿದ್ದ ಈತ, ಬಳಿಕ ಅದೇ ಹೆಸರಿನಲ್ಲಿ ತಂಡ ರಚಿಸಿಕೊಂಡು ಸಮಾಜಬಾಹಿರ ಕೃತ್ಯ ನಡೆಸಿಕೊಂಡು ಬರುತ್ತಿದ್ದ. ೨೦೧೨ರಲ್ಲಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಈತ ಹಾಗೂ ಈತನ ಗ್ರೂಪ್ ಬೆಳಕಿಗೆ ಬಂದಿತ್ತು. ಬಳಿಕ ಈತ ನಟೋರಿಯಸ್ ರೌಡಿ ಆಗಿದ್ದ ಬೆಳೆದಿದ್ದ. ಬಳಿಕ ದೇರಳಕಟ್ಟೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌ರೇಪ್, ಫರಂಗಿಪೇಟೆಯ ಡಬಲ್ ಮರ್ಡರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಈತನ ಜೊತೆ ರೌಡಿಶೀಟರ್ ಸಫ್ವಾನ್, ಉಳ್ಳಾಲ ನಿವಾಸಿ ದಾವೂದ್ ಮತ್ತಿತರರು ಗುರುತಿಸಿಕೊಂಡಿದ್ದರು. ಆದರೆ ಮುಂದಿನ ದಿನಗಳಲ್ಲಿ ಇಲ್ಯಾಸ್ ವಿರುದ್ಧವೇ ಸಫ್ವಾನ್, ದಾವೂದ್ ಕತ್ತಿ ಮಸೆಯಲು ಆರಂಭಿಸಿದ್ದ. ಇದೇ ಕಾರಣಕ್ಕಾಗಿ ಇಲ್ಯಾಸ್ ಜೈಲ್‌ನಿಂದ ಬಿಡುಗಡೆ ಹೊಂದಲು ಕಾಯುತ್ತಿದ್ದ ಆ ತಂಡ ಹತ್ಯೆ ನಡೆಸಿ, ಪರಾರಿಯಾಗಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಸುರೇಶ್, ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ಭೇಟಿ ತನಿಖೆ ನಡೆಸಿದ್ದಾರೆ.

ಗೃಹಸಚಿವರ ಭೇಟಿ ಮರುದಿನ ನಡೆಯಿತು ಹತ್ಯೆ!
ಕಳೆದೆರಡು ವಾರದಿಂದ ಕೋಮುಘರ್ಷಣೆ ಹಿನ್ನೆಲೆಯಲ್ಲಿ ದೀಪಕ್ ರಾವ್ ಹಾಗೂ ನಂತರ ಬಶೀರ್ ಎಂಬ ಅಮಾಯಕರನ್ನು ಭೀಕರವಾಗಿ ಹತ್ಯೆ ನಡೆಸಲಾಗಿತ್ತು. ಇದೇ ಕಾರಣಕ್ಕಾಗಿ ನಿನ್ನೆ ಗೃಹ ಸಚಿವ ರಾಮಲಿಂಗಾರೆಡ್ಡಿಯವರು ಮಂಗಳೂರಿಗೆ ಭೇಟಿ ನೀಡಿ, ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ, ರೌಡಿಗಳನ್ನು ನಿಗ್ರಹಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಮಾತುಕತೆ ನಡೆಸಿದ್ದರು. ಆದರೆ ಸಚಿವರ ಭೇಟಿಯ ಮರುದಿನವೇ ರೌಡಿಯೊಬ್ಬನನ್ನು ಭೀಕರವಾಗಿ ಹತ್ಯೆ ನಡೆಸಲಾಗಿದ್ದು, ನಾಗರಿಕರು ಸಹಜವಾಗಿಯೇ ಭೀತಿಗೊಂಡಿದ್ದಾರೆ. ಕಳೆದ ತಿಂಗಳು ಮೆಲ್ರಿಕ್ ಡಿಸೋಜಾ ಎಂಬಾತನನ್ನು ಭೀಕರವಾಗಿ ಹತ್ಯೆ ನಡೆಸಲಾಗಿದ್ದು, ಇದೀಗ ಅದೇ ಪರಿಸರದಲ್ಲಿ ಇಲ್ಯಾಸ್‌ನನ್ನು ಹತ್ಯೆ ನಡೆಸಲಾಗಿದೆ. ಸಹಜವಾಗಿಯೇ ಸ್ಥಳೀಯರು ಆತಂಕದ ಪರಿಸ್ಥಿತಿಯಲ್ಲಿದ್ದಾರೆ.

ವಿವಾದಕ್ಕೆ ಎರವಾಗಿದ್ದ ಫೋಟೊ
ಇತ್ತೀಚಿಗೆ ಕಾಟಿಪಳ್ಳದಲ್ಲಿ ನಡೆದಿದ್ದ ದೀಪಕ್ ಹತ್ಯೆ ಪ್ರಕರಣದಲ್ಲೂ ಟಾರ್ಗೆಟ್ ಗ್ರೂಪ್‌ನ ಹೆಸರು ಕೇಳಿ ಬಂದಿತ್ತು. ಈ ವೇಳೆ ಸಚಿವ ಖಾದರ್, ಶಾಸಕ ಮೊದಿನ್ ಬಾವಾ ಜೊತೆ ಇಲ್ಯಾಸ್ ಇದ್ದ ಫೋಟೋ ವೈರಲ್ ಆಗಿತ್ತು. ನಂತರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಾಸಕ, ಹಾಗೂ ಸಚಿವರು, ನಮಗೂ ಇಲ್ಯಾಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ರೌಡಿಶೀಟರ್ ಇಲ್ಯಾಸ್‌ನನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ನಡೆಸಲಾಗಿದೆ. ಕರಾವಳಿ ಜಿಲ್ಲೆಯಲ್ಲಿ ಸರಣಿಯಾಗಿ ನಡೆಯುತ್ತಿರುವ ಹತ್ಯೆ ಪ್ರಕರಣ ಇಲ್ಲಿಗೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ನಾಗರಿಕರು ಸಹಜವಾಗಿಯೇ ಭಯಭೀತಿಗೊಂಡಿದ್ದಾರೆ.

Leave a Comment