ಟರ್ಕಿಯಲ್ಲಿ ಭೀಕರ ಭೂಕಂಪ | ೧೮ಕ್ಕೂ ಹೆಚ್ಚು ಮೃತ್ಯು

ಇಸ್ತಾಂಬುಲ್, ಜ.೨೫- ಪೂರ್ವ ಟರ್ಕಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ ೧೮ ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿದ್ದಾರೆ. ಕುಸಿದಿರುವ ಕಟ್ಟಡಗಳ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿರುವ ಮಂದಿಯನ್ನು ರಕ್ಷಿಸುವ ಪರಿಹಾರ ಕಾರ್ಯ ಭರದಿಂದ ಸಾಗಿದೆ.

ರಿಕ್ಟರ್ ಮಾಪಕದಲ್ಲಿ ೬.೮ ತೀವ್ರತೆ ಹೊಂದಿದ್ದ ಭೂಕಂಪ ಸಂಭವಿಸಿದ ಬಳಿಕ ಕನಿಷ್ಠ ೩೦ ಮಂದಿ ನಾಪತ್ತೆಯಾಗಿದ್ದಾರೆ. ಎಲಾಝಿಗ್ ಪೂರ್ವ ಪ್ರಾಂತ್ಯದ ಸಿರ್ವಿಕ್ ಎಂಬಲ್ಲಿನ ಸರೋವರದ ಪಕ್ಕದಲ್ಲಿ ಭೂಕಂಪ ಕೇಂದ್ರಿತವಾಗಿತ್ತು ಎನ್ನಲಾಗಿದೆ. ಅದು ತೀರಾ ಭಯಾನಕ ಅನುಭವ; ಪೀಠೋಪಕರಣಗಳು ನಮ್ಮ ತಲೆ ಮೇಲೆ ಬಿದ್ದವು. ನಾವು ತಕ್ಷಣ ಹೊರಕ್ಕೆ ಓಡಿಬಂದೆವು” ಎಂದು ೪೭ ವರ್ಷದ ಮೆಲಾಹತ್ ಖಾನ್ ಹೇಳಿದ್ದಾರೆ. ಭೂಕಂಪ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ರೆಸಿಪ್ ತಯ್ಯಬ್ ಎರ್ದೊಗಾನ್ ಹೇಳಿದ್ದಾರೆ. ನಮ್ಮ ಜನರ ಬೆಂಬಲಕ್ಕೆ ನಾವಿದ್ದೇವೆ ಎಂದು ಎರ್ದೊಗಾನ್ ಟ್ವೀಟ್ ಮಾಡಿದ್ದಾರೆ. ದುರಂತದ ಹಿನ್ನೆಲೆಯಲ್ಲಿ ದೇಶಾದ್ಯಂತ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಮನೆಗಳಿಂದ ಹೊರಕ್ಕೆ ಓಡಿಬಂದ ಜನ, ಮೈಕೊರೆಯುವ ಚಳಿಯಿಂದ ತಪ್ಪಿಸಿಕೊಳ್ಳಲು ಬೀದಿಗಳಲ್ಲಿ ಬೆಂಕಿ ಹಚ್ಚಿ ರಕ್ಷಿಸಿಕೊಂಡಿದ್ದಾರೆ. ಕನಿಷ್ಠ ೧೮ ಮಂದಿ ಘಟನೆಯಲ್ಲಿ ಬಲಿಯಾಗಿದ್ದು, ೧೩ ಮಂದಿ ಎಲಾಝಿಗ್ ಪ್ರಾಂತ್ಯದಲ್ಲಿ ಹಾಗೂ ಐದು ಮಂದಿ ಸಮೀಪದ ಮಲಾತ್ಯ ಪ್ರಾಂತ್ಯದಲ್ಲಿ ಸಾವಿಗೀಡಾಗಿದ್ದಾರೆ. ೫೫೩ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

Leave a Comment