ಝೀರೋ ಟ್ರಾಫಿಕ್ ಡಿಸಿಎಂ ಕ್ಷಮೆಯಾಚನೆ

ಬೆಂಗಳೂರು, ಜೂ. ೨೮- ಇಲ್ಲಿ ಯಾರು ಮೈತ್ರಿ ಸರ್ಕಾರದ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೋ ಗೊತ್ತಿಲ್ಲ. ಕೆಲವರು ಬಿಜೆಪಿಗೆ ಮತ ಹಾಕಿರಬಹುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಹೇಳುವ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ನಡೆಸಿದರು.
ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನು ಹೊರಹಾಕಿರುವ ಡಾ. ಜಿ. ಪರಮೇಶ್ವರ್ ಅವರು, ಕೆಲವರು ಕಾಂಗ್ರೆಸ್‌ಗೆ, ಮತ್ತೆ ಕೆಲವರು ಬಿಜೆಪಿಗೆ ಮತ ಹಾಕಿದ್ದಾರೆ. ಹೆಚ್ಚಿನ ಮಂದಿ ಬಿಜೆಪಿಗೆ ಮತ ಹಾಕಿರಬಹುದು ಎಂದು ಅವರು ತಿಳಿಸಿದರು.
ಆರ್.ಟಿ. ನಗರದಲ್ಲಿ ರಸ್ತೆ ಕಾಮಗಾರಿ ಪರಿಶೀಲನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಎದುರಾಗಿದ್ದರಿಂದ ಈ ಭಾಗದ ಕಾಮಗಾರಿಯನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಈಗ ಚುನಾವಣೆ ಮುಗಿದಿದೆ. ಹಾಗಾಗಿ ಕಾಮಗಾರಿಯನ್ನು ವೀಕ್ಷಿಸಿದ್ದೇನೆ. ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಡಿಸಿಎಂ ಕ್ಷಮೆಯಾಚನೆ
ಆರ್.ಟಿ. ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲಿಸಲು ತೆರಳಿದ್ದ ಉಪಮುಖ್ಯಮಂತ್ರಿ ಪರಮೇಶ್ವರ್ ಅವರಿಗೆ ಸಂಚಾರಿ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಬೆಳಿಗ್ಗೆ ಶಾಲಾ – ಕಾಲೇಜುಗಳು ಆರಂಭವಾಗಿದ್ದು, ಇದೇ ವೇಳೆ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದರು. ಇದನ್ನು ಅರಿತ ಪರಮೇಶ್ವರ್ ಅವರು, ನನ್ನಿಂದ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದಲ್ಲಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.

Leave a Comment