ಜ.28 ರಾಜ್ಯ ಮಟ್ಟದ ಜಾನಪದ ಪ್ರಪಂಚ ಪ್ರಶಸ್ತಿ ಸಮಾರಂಭ

ರಾಯಚೂರು.ಡಿ.07- ನಗರದಲ್ಲಿ ಇದೇ ಪ್ರಪ್ರಥಮ ಬಾರಿಗೆ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಂಟಿ ಸಂಯುಕ್ತಾಶ್ರಯದಲ್ಲಿ ಜ.28 ರಂದು ಸ್ಥಳೀಯ ರಂಗಮಂದಿರದಲ್ಲಿ ರಾಜ್ಯ ಮಟ್ಟದ ಕನ್ನಡ ಜಾನಪದ ಪ್ರಪಂಚ ಪ್ರಶಸ್ತಿ ಸಮಾರಂಭ ಆಯೋಜಿಸಲಾಗಿದೆಂದು ಪರಿಷತ್ ರಾಜ್ಯ ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.
ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಸತತ ಮೂರನೇ ರಾಜ್ಯ ಮಟ್ಟದ ಕನ್ನಡ ಜಾನಪದ ಪ್ರಪಂಚ ಪ್ರಶಸ್ತಿ ಸಮಾರಂಭವನ್ನು ಎಡದೊರೆ ನಾಡಿನ ಪಂ.ಸಿದ್ರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ನುರಿತ 13 ಕಲಾವಿದರಿಗೆ ಜಾನಪದ ಪ್ರಪಂಚ ಪ್ರಶಸ್ತಿ, ಇಬ್ಬರು ಹೆಸರಾಂತ ವಿದ್ವಾಂಸಸರಿಗೆ ಕನ್ನಡ ಜಾನಪದ ಪ್ರಪಂಚ ಪ್ರಶಸ್ತಿ ಸಮೇತ 3 ಸಾವಿರ ನಗದುನೊಂದಿಗೆ ಸ್ಮರಣಿಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ರಾಜ್ಯದ 30 ಜಿಲ್ಲೆಗಳಿಂದ ಜಾನಪದ ಕಲಾವಿದರು ಹಾಗೂ ಕಲಾ ತಂಡಗಳು ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದು, ಆಯ್ದಾ ಕಲಾ ತಂಡಗಳಿಂದ ವೈಭವದ ಮೆರವಣಿಗೆ, ಜಾನಪದ ವಿದ್ವಾಂಸರಿಂದ ವಿಚಾರ ಸಂಕಿರಣ, ಜಾನಪದ ಕಲೆ ಉಳಿವಿಗಾಗಿ ಕಲಾವಿದರೊಂದಿಗೆ ಚರ್ಚಾಕೂಟ ಸಮಾರಂಭ ಸೇರಿದಂತೆ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಜಾನಪದ ಸಮೂಹ ಗೀತೆ, ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಜ್ಯಾದ್ಯಂತ ಮೂಲ ಕಲಾವಿದರ ಸಮೀಕ್ಷೆ ಕಾರ್ಯ ಮುಕ್ತಾಯ ಹಂತಕ್ಕೆ ತಲುಪಿದ್ದು, ಜಾನಪದ ಕಲಾವಿದರ ಗಣತಿ ಕಾರ್ಯ ಪ್ರಗತಿಯಲ್ಲಿದೆ. ಜಾನಪದ ಕಲೆಯಲ್ಲಿ ವಿಶಿಷ್ಟ ಸಾಧನೆಗೈದು ಎಲೆಮರೆ ಕಾಯಿಯಂತಿರುವ 60 ವರ್ಷ ತುಂಬಿದ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಸಮಾರಂಭಕ್ಕೆ ಸರ್ವಾನು ಮತದಿಂದ ಆಯ್ಕೆ ಮಾಡಲಿದ್ದು, ರಾಜ್ಯ ವಿವಿಧ ಭಾಗಗಳಿಂದ ಸಮಾರಂಭಕ್ಕೆ ಆಗಮಿಸುವ ಕಲಾವಿದರಿಗೆ ವಸತಿಯೊಂದಿಗೆ ಉಚಿತ ಉಪಹಾರ ವ್ಯವಸ್ಥೆಯೂ ಕಲ್ಪಿಸಲಾಗುವುದೆಂದರು.
ಜಿಲ್ಲಾ ಘಟಕ ಅಧ್ಯಕ್ಷರಾದ ಶರಣಪ್ಪ ಗೋನಾಳ, ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ, ಸಂಘಟನಾ ಕಾರ್ಯದರ್ಶಿ ದಂಡಪ್ಪ ಬಿರಾದರ ಉಪಸ್ಥಿತರಿದ್ದರು.

Leave a Comment