ಜ. 17: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

(ನಮ್ಮ ಪ್ರತಿನಿಧಿಯಿಂದ)
ಬೆಂಗಳೂರು, ಜ. ೧೩- ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಫಲಾನುಭವಿಗಳ ಬೇಡಿಕೆ ಈಡೇರಿಸಲು ಒತ್ತಾಯಿಸಿ ಜ. 17 ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಜ್ಯ ಅಂಗನವಾಡಿ ಕಾರ್ಯಕರ್ತರ ಮಹಾಮಂಡಳ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ರಾಜ್ಯದಲ್ಲಿ 65,911 ಅಂಗನವಾಡಿ ಕೇಂದ್ರಗಳಿದ್ದು, 34 ಸಾವಿರ ಸ್ವಂತ ಕಟ್ಟಡಗಳಿವೆ. 26 ಸಾವಿರ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ಜಾರಿಯಾದ ಮಾತೃಪೂರ್ಣ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.
ಗರ್ಭಿಣಿ ಹಾಗೂ ಬಾಣಂತಿಯರು 2-3 ಕಿ.ಮೀ ದೂರದಿಂದ ನಡೆದು ಬರುವ ಪರಿಸ್ಥಿತಿ ಇರುವ ಕಾರಣ ಕೇಂದ್ರಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಕಾರಣ ಶೇ. 40 ರಷ್ಟು ಪೌಷ್ಠಿಕ ಆಹಾರ ದುರ್ಬಳಕೆ ವಿವಿಧ ಹಂತಗಳಲ್ಲಿ ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಜಿ.ಆರ್. ಶಿವಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೇಡಿಕೆಗಳು
42ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್ ತೀರ್ಮಾನದನ್ವಯ ಮಾಸಿಕ 18 ಸಾವಿರ ವೇತನ ಹಾಗೂ 3 ಸಾವಿರ ಪಿಂಚಣಿಯನ್ನು ಜಾರಿಗೆ ತರಬೇಕು. ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಸಮಗ್ರ ಬಾಲವಿಕಾಸ ಯೋಜನೆಯನ್ನು ಖಾಸಗೀಕರಣಗೊಳಿಸಬಾರದು, ಮಾತೃಪೂರ್ಣ ಯೋಜನೆ ಕುರಿತಂತೆ ಸಮೀಕ್ಷೆ ನಡೆಸಿ ಅಭಿಪ್ರಾಯ ಸಂಗ್ರಹಿಸಿ ಫಲಾನುಭವಿಗಳ ಹಿತದೃಷ್ಟಿಯಿಂದ ಅಗತ್ಯಕ್ರಮ ಕೈಗೊಳ್ಳಬೇಕು.

ಬಾಲವಿಕಾಸ ಸಮಿತಿ ಪುನರ್‌ರಚಿಸುವಲ್ಲಿ ಗ್ರಾಮ, ನಗರ, ಪಟ್ಟಣ ಪಂಚಾಯ್ತಿ ಸದಸ್ಯರನ್ನು ಖಾತೆ ತೆರೆಯಲು ಕಡ್ಡಾಯ ಮಾಡಿರುವುದನ್ನು ವಾಪಸ್ ಪಡೆಯಬೇಕು. ಅಂಗನವಾಡಿ ಕೇಂದ್ರದ ಕೆಲಸದ ವೇಳೆಯನ್ನು ಹಿಂದೆ ಇದ್ದ ವೇಳೆಯಂತೆ ಬದಲಾಯಿಸಬೇಕು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣಪ್ರಮಾಣದ ಅಂಗನವಾಡಿ ಕೇಂದ್ರಗಳನ್ನಾಗಿ ಪರಿವರ್ತಿಸಬೇಕೂ ಸೇರಿದಂತೆ ಮಾತೃಪೂರ್ಣಯೋಜನೆಗೆ ಸಂಬಂಧಿಸಿದ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದರು.

ವೇದಿಕೆಯಲ್ಲಿ ಪದಾಧಿಕಾರಿಗಳಾದ ವಿಜಯಲಕ್ಷ್ಮಿ, ನಾಗರತ್ನ, ಪದ್ಮ, ಕಾವ್ಯ ಉಪಸ್ಥಿತರಿದ್ದರು.

Leave a Comment