ಜ. ೧೭ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ

ಬೆಂಗಳೂರು, ಜ. ೧೪- ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ಜನವರಿ ೧೭ ರಿಂದ ೧೦ ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದರ ೧೫೭ನೇ ಜನ್ಮ ದಿನಾಚರಣೆ ಸ್ಮರಣಾರ್ಥ ಕನ್ಯಾಕುಮಾರಿಯಲ್ಲಿರುವ ಸ್ಮಾರಕ ಶಿಲಾ ಬಂಡೆಯ ಮೇಲೆ ನಿಂತಿರುವ ವಿವೇಕ ಪುಷ್ಫ ದೃಶ್ಯ ಲಾಲ್ ಬಾಗ್‌ನ ಗಾಜಿನ ಮನೆಯಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಗಾಜಿನ ಮನೆಯ ಮಧ್ಯಭಾಗದಲ್ಲಿ ಜ್ಞಾನ ಕೇಂದ್ರ ಪ್ರತಿಕೃತಿ ಕೂಡ ನಿರ್ಮಾಣವಾಗುತ್ತಿದೆ. ಅಲ್ಲದೇ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಹಾಗೂ ಅವರ ಆದರ್ಶವನ್ನು ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು ಎಂದು ಪತ್ರಿಕಾ ಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ನಿರ್ದೇಶಕ ಪಿ.ವೆಂಕಟೇಶ್ ಅವರು ತಿಳಿಸಿದರು. ಅಮೆರಿಕಾದ ಚಿಕಾಗೋದಲ್ಲಿ ೧೮೯೩ ರಲ್ಲಿ ವಿಶ್ವ ಧರ್ಮ ಸಂಸತ್‌ನಲ್ಲಿ ವಿವೇಕಾನಂದರ ಭಾಷಣದ ವೇದಿಕೆ, ಭಾಷಣವನ್ನು ಆಲಿಸಲು ವಿಶ್ವದ ನಾನಾ ಭಾಗಗಳಿಂದ ಆಗಮಿಸಿದ್ದ ಧರ್ಮ ಗುರುಗಳು ಭಾಗಿಯಾಗಿರುವುದನ್ನು ಫಲಪುಷ್ಪಗಳ ಮೂಲಕ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ರಾಜ್ಯ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘದ ಜಂಟಿ ಸಹಭಾಗಿತ್ವದಲ್ಲಿ ಲಾಲ್ ಬಾಗ್‌ನ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಸ್ವಾಮಿ ವಿವೇಕಾನಂದರ ಸಂಪೂರ್ಣ ಇತಿಹಾಸವನ್ನು ಮುಂದಿನ ಪೀಳಿಗೆಗೆ ನೆನಪಿಸಿಕೊಡುವ ಮೂಲಕ ಸಂದೇಶಗಳನ್ನು ಸಾರಲಾಗುತ್ತಿದೆ.
ಸ್ವಾಮಿ ವಿವೇಕಾನಂದರ ಸಂಪೂರ್ಣ ಇತಿಹಾಸ ಹಿಂದೂ ಧರ್ಮದ ಪ್ರಚಾರ ಹಾಗೂ ಜೀವನವನ್ನು ಫಲಪುಷ್ಪ ಪ್ರದರ್ಶನ ಮೂಲಕ ಅನಾವರಣಗೊಳಿಸಲಾಗುತ್ತಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ ೧.೯ ಕೋಟಿ ವೆಚ್ಚಮಾಡಲಾಗುತ್ತಿದೆ ಎಂದು ಹೇಳಿದರು.
ಊಟಿ, ಡಾರ್ಜಿಲಿಂಗ್ ಮತ್ತು ಕೇರಳ ರಾಜ್ಯಗಳಿಂದ ಸುಮಾರು ೬ ಲಕ್ಷಕ್ಕೂ ಹೆಚ್ಚು ಗುಲಾಬಿ ಹೂವುಗಳನ್ನು ತರಿಸಿಕೊಳ್ಳಲಾಗಿದೆ.
ಸ್ವಾಮಿ ವಿವೇಕಾನಂದರ ಉಲ್ಲೇಖಿಸಿರುವ ನೀತಿ ಕಥೆಗಳ ದೃಶ್ಯ, ಪ್ರಾತ್ಯಕ್ಷಿಕೆ, ವಿವೇಕಾನಂದರ ಘೋಷಣೆ, ಸೂಕ್ತಿಗಳು, ವಿವೇಕಾ ವೃಕ್ಷ, ಪಂಚವಟಿಯಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದ ಮೊದಲಾದ ಶಿಷ್ಯಂದಿರಿಗೆ ಉಪದೇಶ ಮಾಡುತ್ತಿದ್ದ ಸನ್ನಿವೇಶವನ್ನು ಮರು ಸೃಷ್ಟಿಸಲಾಗಿದೆ ಎಂದು ಹೇಳಿದರು.

Leave a Comment