ಜ್ಯೋತಿಷಿ ಸಹಿತ ಇಬ್ಬರಿಗೆ ಹಲ್ಲೆ

ಹಿಂ.ಜಾವೇ ಮುಖಂಡರ ಸಹಿತ ೯ ಸೆರೆ
ಪುತ್ತೂರು, ಆ.೧- ಜ್ಯೋತಿಷಿ ಮತ್ತು ಅವರ ಸ್ನೇಹಿತರೊಬ್ಬರು ಹೋಗುತ್ತಿದ್ದ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ ತಂಡವೊಂದು ಅವರಿಬ್ಬರಿಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಹಿಂದು ಜಾಗರಣಾ ವೇದಿಕೆಯ ಇಬ್ಬರು ಮುಖಂಡರು ಸಹಿತ ೯ ಮಂದಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಕೊಂಬೆಟ್ಟು ದಿ.ಪುರುಷೋತ್ತಮ ರೈ ಅವರ ಪುತ್ರ ಶಶಿಕಾಂತ್(೨೫), ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ನಿವಾಸಿ ಸದಾಶಿವ ರೈ ಅವರ ಪುತ್ರ ಚಿನ್ಮಯ ರೈ(೨೮), ಸಾಮೆತ್ತಡ್ಕ ಅನುಪ್ ಕಂಪೌಂಡ್‌ನ ದಿ.ಸೀತಾರಾಮ ಶೆಟ್ಟಿ ಅವರ ಪುತ್ರ ಕೃಷ್ಣಪ್ರಸಾದ್(೪೦), ನರಿಮೊಗರು ಪುರುಷರಕಟ್ಟೆ ಇಂದಿರಾನಗರ ನಿವಾಸಿ ಜನಾರ್ದನ ಎಂಬವರ ಪುತ್ರ ಅವಿನಾಶ್ ಜೋಗಿ(೨೭), ಇಂದಿರಾನಗರದ ವೇಣುನಾಥ್ ಅವರ ಪುತ್ರ ಅವಿನಾಶ್ ಯಾನೆ ಅಭಿ(೨೧), ಶಾಂತಿಗೋಡು ಗ್ರಾಮದ ಪಂಜಿಗ ದಿ.ಲೋಕಪ್ಪ ಗೌಡರ ಪುತ್ರ ದಿನೇಶ್ (೩೨), ಅರಿಯಡ್ಕ ಗ್ರಾಮದ ಪಾಪೆಮಜಲು ನಿವಾಸಿ ಅಮ್ಮಣ್ಣ ರೈ ಅವರ ಪುತ್ರ ಸಚಿನ್ ರೈ(೩೨), ನೆಟ್ಟಣಿಗೆಮುಡ್ನೂರು ಗ್ರಾಮದ ಈಶ್ವರಮಂಗಲ ಪಂಚೋಡಿ ನಿವಶಿ ಚಂದ್ರಶೇಖರ್ ಎಂಬವರ ಪುತ್ರ ರಾಕೇಶ್ ಪಂಚೋಡಿ(೨೭), ಆರ್ಯಾಪು ಗ್ರಾಮದ ನೇರ್ಲ ನಿವಾಸಿ ರಮೇಶ್ ಎಂಬವರ ಪುತ್ರ ಕಾರ್ತಿಕ್(೨೫)ರವರು ಬಂಧಿತ ಆರೋಪಿಗಳು.
ಜು.೨೯ರಂದು ರಾತ್ರಿ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ನಿವಾಸಿ, ವೃತ್ತಿಯಲ್ಲಿ ಜ್ಯೋತಿಷಿ ಆಗಿರುವ ಡಿ.ಕೆ.ಸ್ವಾಮೀಜಿ (೪೩) ಮತ್ತು ಅವರ ಜತೆಗಿದ್ದ ಮಂಗಳೂರಿನ ಮರೋಳಿ ಮಾರಿಕಾಂಬ ದೇವಸ್ಥಾನದ ಬಳಿಯ ನಿವಾಸಿ ತೇಜಾಕ್ಷ ಸುವರ್ಣ ಅವರ ಪುತ್ರ ಅಭಿಷೇಕ್ (೨೩)ರವರು ತಮ್ಮ ಮಾರುತಿ ಎರಿಟಿಗಾ ಕಾರಿನಲ್ಲಿ ಪುತ್ತೂರು ಮುಖ್ಯರಸ್ತೆಯ ನಿರಾಳ ಬಾರ್ ಆಂಡ್ ರೆಸ್ಟೋರೆಂಟ್‌ನ ಪಕ್ಕದಲ್ಲಿರುವ ಉಳ್ಳಾಲ್ತಿ ಕಟ್ಟೆಯ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಕಾರು ಮತ್ತು ನಾಲ್ಕು ಬೈಕ್‌ಗಳಲ್ಲಿ ಬಂದ ೧೫ ಮಂದಿಯ ಅಪರಿಚಿತ ತಂಡವೊಂದು ಅವರ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಮರದ ತುಂಡಿನಿಂದ ಹಲ್ಲೆ ನಡೆಸಿದ್ದರು. ಈ ಕುರಿತು ಗಾಯಾಳು ನೀಡಿದ ದೂರಿನಂತೆ ಪುತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಮಂಗಳವಾರ ಪುತ್ತೂರು ಪೊಲೀಸರು ೯ ಮಂದಿಯನ್ನು ಬಂಧಿಸಿದ್ದಾರೆ.

Leave a Comment